* ದುಬೈನಲ್ಲಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಫೈಟ್* ಅಗ್ರಸ್ಥಾನಕ್ಕಾಗಿಂದು ಬಲಿಷ್ಠ ತಂಡಗಳ ನಡುವೆ ಕಾದಾಟ*  12 ಪಂದ್ಯಗಳಲ್ಲಿ ತಲಾ 9ರಲ್ಲಿ ಜಯ ಸಾಧಿಸಿ ತಲಾ 18 ಅಂಕ ಗಳಿಸಿರುವ 2 ತಂಡಗಳು

ದುಬೈ(ಅ.04): 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ ಈಗಾಗಲೇ ಪ್ಲೇ-ಆಫ್‌ ಸುತ್ತಿಗೆ ಅಧಿಕೃತ ಪ್ರವೇಶ ಪಡೆದಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಭದ್ರಗೊಳಿಸುವ ಲೆಕ್ಕಾಚಾರದಲ್ಲಿವೆ.

ಎರಡೂ ತಂಡಗಳು ಆಡಿರುವ 12 ಪಂದ್ಯಗಳಲ್ಲಿ ತಲಾ 9ರಲ್ಲಿ ಜಯ ಸಾಧಿಸಿ ತಲಾ 18 ಅಂಕ ಗಳಿಸಿವೆ. ಆದರೆ, ನೆಟ್ ರನ್‌ ರೇಟ್‌ ಆಧಾರದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಮುಂದಿದ್ದು, ಅಗ್ರಸ್ಥಾನ ಕಾಯ್ದುಕೊಂಡಿದೆ. ಇನ್ನು ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್‌ 2ನೇ ಸ್ಥಾನದಲ್ಲಿದೆ. ಇಬ್ಬರಿಗೂ ತಲಾ 2 ಪಂದ್ಯಗಳಿದ್ದು, ಎರಡರಲ್ಲೂ ಜಯ ಸಾಧಿಸಿ ಅಗ್ರಸ್ಥಾನ ಖಚಿತ ಪಡಿಸಿಕೊಳ್ಳುವ ತವಕದಲ್ಲಿವೆ. ಏಕೆಂದರೆ, ಕ್ವಾಲಿಫೈಯರ್‌-1ರಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ ಪ್ರವೇಶ ಪಡೆದರೆ, ಸೋಲುವ ತಂಡಕ್ಕೆ ಮತ್ತೊಂದು ಅವಕಾಶ ಲಭಿಸಲಿದೆ. ಆದ ಕಾರಣ ಟಾಪ್‌-2ರಲ್ಲಿ ಉಳಿಯುವ ದೃಷ್ಟಿಯಿಂದ ಇತ್ತಂಡಗಳಿಗೂ ಮಹತ್ವದ ಪಂದ್ಯವಾಗಿದೆ.

Scroll to load tweet…

IPL 2021: ಹೈದರಾಬಾದ್ ವಿರುದ್ಧ ಗೆಲುವು, KKR ಪ್ಲೇ ಆಫ್ ಕನಸಿಗೆ ಮತ್ತಷ್ಟು ಜೀವ!

ಸಂಘಟಿತ ಪ್ರದರ್ಶನ ನೀಡುತ್ತಿರುವ ಚೆನ್ನೈ, ಐಪಿಎಲ್‌ 14ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಾಯಕ್ವಾಡ್‌, ಫ್ಲಾಫ್‌ ಡುಪ್ಲೆಸಿ, ಮೋಯಿನ್‌ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಧೋನಿ ಬ್ಯಾಟಿಂಗ್‌ ಟ್ರಂಪ್‌ ಕಾರ್ಡ್‌ಗಳಾದರೆ, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಹರ್‌, ಹೇಜಲ್‌ವುಡ್‌ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ. ಆದಾಗ್ಯೂ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ತಂಡ ಆಘಾತಕಾರಿ ಸೋಲುಂಡಿತ್ತು.

Scroll to load tweet…

ಇನ್ನು ಕೋಲ್ಕತ ನೈಟ್‌ ರೈಡರ್ಸ್‌ (KKR) ವಿರುದ್ಧದ ಸೋಲಿನ ಆಘಾತದಿಂದ ಪುಟಿದೆದ್ದ ಡೆಲ್ಲಿ, ಮುಂಬೈ ಇಂಡಿಯನ್ಸ್‌ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ. ಶಿಖರ್‌ ಧವನ್‌, ಸ್ಟೀವ್‌ ಸ್ಮಿತ್‌, ಪೃಥ್ವಿ ಶಾ ನೈಜ ಪ್ರದರ್ಶನ ನೀಡಿದರೆ ಗೆಲುವು ಸುಲಭವಾಗಲಿದೆ. ಬೌಲಿಂಗ್‌ನಲ್ಲಿ ಕಗಿಸೋ ರಬಾಡ, ಆನ್ರಿಚ್ ನೊಕಿಯೆ ಜತೆಗೆ ದೇಸಿ ವೇಗಿ ಆವೇಶ್ ಖಾನ್ ಮಾರಕ ದಾಳಿ ನಡೆಸುತ್ತಿರುವುದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪ್ಲಸ್ ಪಾಯಿಂಟ್ ಎನಿಸಿದೆ.

ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು ಒಟ್ಟು 24 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಸ್ಪಷ್ಟ ಮೇಲುಗೈ ಸಾಧಿಸಿದೆ. 24 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 9 ಬಾರಿ ಗೆಲುವಿನ ರುಚಿ ಕಂಡಿದೆ.

ಸಂಭವನೀಯ ಆಟಗಾರರ ಪಟ್ಟಿ:

ಡೆಲ್ಲಿ ಕ್ಯಾಪಿಟಲ್ಸ್‌:

ರಿಷಭ್ ಪಂತ್‌(ನಾಯಕ), ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್ ಅಯ್ಯರ್‌, ಸ್ಟೀವ್‌ ಸ್ಮಿತ್‌, ಶಿಮ್ರೊನ್‌ ಹೆಟ್ಮೇಯರ್‌, ಅಕ್ಷರ್ ಪಟೇಲ್‌‌, ರವಿಚಂದ್ರನ್‌ ಅಶ್ವಿನ್‌, ಕಗಿಸೋ ರಬಾಡ, ಆನ್ರಿಚ್ ನೊಕಿಯೆ‌, ಆವೇಶ್‌ ಖಾನ್

ಚೆನ್ನೈ ಸೂಪರ್ ಕಿಂಗ್ಸ್‌:

ಎಂ ಎಸ್ ಧೋನಿ(ನಾಯಕ), ಋತುರಾಜ್ ಗಾಯಕ್ವಾಡ್‌, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಮೊಯಿನ್ ಅಲಿ‌, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್‌, ದೀಪಕ್‌ ಚಹರ್, ಶಾರ್ದೂಲ್‌ ಠಾಕೂರ್‌, ಜೋಸ್‌ ಹೇಜಲ್‌ವುಡ್‌

ಸ್ಥಳ: ದುಬೈ
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌