41ನೇ ವಸಂತಕ್ಕೆ ಕಾಲಿರಿಸಿದ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ* ಮೂರು ಐಸಿಸಿ ಟ್ರೋಫಿ ಗೆದ್ದ ಜಗತ್ತಿನ ಏಕೈಕ ನಾಯಕ ಧೋನಿ* ಹಲವು ಅವಿಸ್ಮರಣೀಯ ಕ್ಷಣಗಳನ್ನು ನೀಡಿರುವ ಕ್ಯಾಪ್ಟನ್ ಕೂಲ್

ಬೆಂಗಳೂರು(ಜು.07): ಭಾರತವು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ದಿಗ್ಗಜ ಆಟಗಾರರ ಪೈಕಿ ಮಹೇಂದ್ರ ಸಿಂಗ್ ಧೋನಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ನಾಯಕ, ಕೀಪರ್, ಮ್ಯಾಚ್ ಫಿನಿಶರ್ ಹೀಗೆ ಓಂದೂವರೆ ದಶಕಗಳ ಕಾಲ ಕ್ರಿಕೆಟ್‌ ಅಕ್ಷರಶಃ ಕ್ರಿಕೆಟ್ ಜಗತ್ತನ್ನು ಆಳಿದ್ದ ಧೋನಿ ಇಂದು, ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತಕ್ಕೆ ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಹೀಗೆ ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿ, ಕ್ರಿಕೆಟ್‌ನಲ್ಲಿ ಹಲವು ಅಚ್ಚಳಿಯದೇ ಉಳಿಯುವಂತಹ ಕ್ಷಣಗಳನ್ನು ಸೃಷ್ಠಿಸಿದ್ದಾರೆ. ಅಂತಹ ಟಾಪ್ 5 ಅವಿಸ್ಮರಣಗಳನ್ನು ನಾವಿಂದು ಮೆಲಕು ಹಾಕೋಣ

2007ರ ಐಸಿಸಿ ಟಿ20 ವಿಶ್ವಕಪ್ ಗೆಲುವು

2007ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವು ಗ್ರೂಪ್‌ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿತ್ತು. ಹೀಗಾಗಿ 2007ರ ಟಿ20 ವಿಶ್ವಕಪ್ ಟೂರ್ನಿಗೆ ಧೋನಿಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಈ ಟೂರ್ನಿಯಲ್ಲಿ ಧೋನಿ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಭಾರತದ ಹಲವು ಹಿರಿಯ ಆಟಗಾರರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಯುವ ಆಟಗಾರರನ್ನೊಳಗೊಂಡ ಧೋನಿ ನೇತೃತ್ವದ ಟೀಂ ಇಂಡಿಯಾ, ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು ಚಾಂಪಿಯನ್‌ ಆಗಿದ್ದು, ಯಾವ ಕ್ರಿಕೆಟ್‌ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಟಿ20 ವಿಶ್ವಕಪ್ ಫೈನಲ್‌ನ ಕೊನೆಯ ಓವರ್‌ ಎಸೆಯಲು ಜೋಗಿಂದರ್ ಶರ್ಮಾಗೆ ಚೆಂಡನ್ನಿತ್ತು ರೋಚಕ ಜಯ ಸಾಧಿಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ.

Scroll to load tweet…

ಧೋನಿ ನೇತೃತ್ವದಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟ

ಐಸಿಸಿಯು 2003ರಲ್ಲಿ ರ‍್ಯಾಂಕಿಂಗ್‌ ನೀಡುವ ಪದ್ದತಿಯನ್ನು ಜಾರಿಗೊಳಿಸಿತ್ತು. ಭಾರತವು ಬಲಿಷ್ಠ ಟೆಸ್ಟ್‌ ತಂಡವಾಗಿದ್ದರೂ ಸಹಾ, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. ಆದರೆ 2009ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ, ಶ್ರೀಲಂಕಾ ಎದುರು 2-0 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸುವ ಮೂಲಕ ತಂಡವನ್ನು ನಂ.1 ಸ್ಥಾನಕ್ಕೇರಿಸಿದ್ದರು. ಆ ಸರಣಿಯಲ್ಲಿ ಧೋನಿ ಎರಡು ಸೆಂಚುರಿ ಬಾರಿಸಿದ್ದರು. ಇದಾದ ಬಳಿಕ ಟೀಂ ಇಂಡಿಯಾ 2011ರ ಜುಲೈವರೆಗೂ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿಯೇ ಮುಂದುವರೆದಿತ್ತು.

2011ರ ಏಕದಿನ ವಿಶ್ವಕಪ್ ಗೆಲುವು

2011ಕ್ಕಿಂತ ಮೊದಲು ಯಾವುದೇ ಆತಿಥ್ಯ ವಹಿಸಿದ್ದ ದೇಶವು ಐಸಿಸಿ ಏಕದಿನ ವಿಶ್ವಕಪ್ ಜಯಿಸಿರಲಿಲ್ಲ. ಆದರೆ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಹಲವು ಬಲಿಷ್ಠ ತಂಡಗಳನ್ನು ಮಣಿಸಿ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಶ್ರೀಲಂಕಾ ಎದುರಿನ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಧೋನಿ, ಗೌತಮ್ ಗಂಭೀರ್ ಜತೆಗೂಡಿ 109 ರನ್‌ಗಳ ಜತೆಯಾಟವಾಡಿದ್ದರು. ಇದಷ್ಟೇ ಅಲ್ಲದೇ ಸಿಕ್ಸರ್ ಸಿಡಿಸುವ ಮೂಲಕ ಫೈನಲ್‌ ಪಂದ್ಯದಲ್ಲಿ ಧೋನಿ ಗೆಲುವಿನ ದಡ ಸೇರಿಸಿದ್ದು ನಿಜಕ್ಕೂ ಒಂದು ರೀತಿಯ ದೃಶ್ಯಕಾವ್ಯ.

YouTube video player

2013ರಲ್ಲಿ ಆಸ್ಟ್ರೇಲಿಯಾ ಎದುರು ದ್ವಿಶತಕ ಚಚ್ಚಿದ್ದ ಧೋನಿ..!

ಹೊಡಿಬಡಿಯಾಟಕ್ಕೆ ಹೆಸರುವಾಸಿಯಾದ ಮಹೇಂದ್ರ ಸಿಂಗ್ ಧೋನಿ, ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಕ್ರೀಸ್‌ಗಿಳಿಯುವಾಗ ಭಾರತ ಕ್ರಿಕೆಟ್ ತಂಡವು 200ಕ್ಕಿಂತ ಹೆಚ್ಚು ರನ್‌ಗಳ ಹಿನ್ನೆಡೆಯಲ್ಲಿತ್ತು. ಧೋನಿ ಏಕದಿನ ಮಾದರಿಯಲ್ಲಿ ಬ್ಯಾಟ್‌ ಬೀಸಿ 266 ಎಸೆತಗಳಲ್ಲಿ 224 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾ ಎದುರಿನ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 4-0 ಅಂತರದಲ್ಲಿ ವೈಟ್‌ವಾಷ್ ಮಾಡಿತ್ತು.

2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವು

Scroll to load tweet…

ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಯಶಸ್ವಿ ಓಪನ್ನರ್ ಆಗಿ ಮಿಂಚಿತು. ಇಂಗ್ಲೆಂಡ್ ಎದುರಿನ ಫೈನಲ್‌ನಲ್ಲಿ ಟೀಂ ಇಂಡಿಯಾ ಸಾಧಾರಣ ಮೊತ್ತ ಕಲೆಹಾಕಿತಾದರೂ, ಧೋನಿ ತಮ್ಮ ಚಾಣಾಕ್ಷ ನಾಯಕತ್ವದ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಮಹತ್ವದ ಘಟ್ಟದಲ್ಲಿ ದುಬಾರಿಯಾಗಿದ್ದ ಇಶಾಂತ್‌ ಶರ್ಮಾಗೆ ಬೌಲಿಂಗ್ ನೀಡಿ, ಗೇಮ್‌ ಚೇಂಜ್ ಆಗುವಂತೆ ಮಾಡಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ.