* ಕ್ರಿಕೆಟ್‌ ಕಂಡ ಅತ್ಯಂತ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಹುಟ್ಟುಹಬ್ಬದ ಸಂಭ್ರಮ* ಧೋನಿ ನಾಯಕತ್ವದಲ್ಲಿ ಮೂರೂ ವಿಶ್ವಕಪ್‌ ಗೆದ್ದ ಭಾರತ* ಕ್ಯಾಪ್ಟನ್‌ ಕೂಲ್‌ಗೆ ಶುಭ ಕೋರಿದ ಬಿಸಿಸಿಐ

ರಾಂಚಿ(ಜು.07): ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದ್ದ, ಭಾರತೀಯ ಕ್ರಿಕೆಟ್‌ ಕಂಡ ಅತ್ಯಂತ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಇಂದು(ಜುಲೈ 07) 40ನೇ ಹುಟ್ಟುಹಬ್ಬದ ಸಂಭ್ರಮ. ಟೀಂ ಇಂಡಿಯಾದ ಮಾಜಿ ನಾಯಕನ ಹುಟ್ಟುಹಬ್ಬಕ್ಕೆ ಕ್ರಿಕೆಟಿಗರು, ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಹರಿಯುತ್ತಿದೆ.

ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಜಿ ನಾಯಕ ಎಂಎಸ್‌ ಧೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. 'ದಂತಕತೆ ಹಾಗೂ ಸ್ಪೂರ್ತಿ' ಟೀಮ್‌ ಇಂಡಿಯಾ ಮಾಜಿ ನಾಯಕ ಎಂಎಸ್‌ ಧೋನಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಟ್ವೀಟ್‌ ಮಾಡಿದೆ.

Scroll to load tweet…

ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾ, ಟೀಮ್‌ ಇಂಡಿಯಾ ಹಿರಿಯ ವೇಗಿ ಇಶಾಂತ್‌ ಶರ್ಮಾ, ಮಾಜಿ ಆಟಗಾರ ಮೊಹಮ್ಮದ್‌ ಕೈಫ್‌ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಆಟಗಾರರು ರಾಂಚಿ ಮೂಲದ ಆಟಗಾರನ ಜನುಮ ದಿನಕ್ಕೆ ಶುಭ ಕೋರಿದ್ದಾರೆ.

Scroll to load tweet…

ಟೀಂ ಇಂಡಿಯಾದ ದಿಗ್ಗಜ ನಾಯಕನ ಕ್ರಿಕೆಟ್ ಪಯಣ:

ಭಾರತ ತಂಡದ ಅತ್ಯಂತ ಯಶಸ್ವಿ ನಾಯಕ ಎಂ.ಎಸ್‌ ಧೋನಿ ಸಾಧನೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಮಹಿ ನಾಯಕತ್ವದಲ್ಲಿ ಭಾರತ 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದು ಸ್ಥಾಪಿಸಿತು. 2007ರ ಐಸಿಸಿ ಟಿ20 ವಿಶ್ವಕಪ್‌, 2011ರ ಐಸಿಸಿ ಏಕದಿನ ವಿಶ್ವಕಪ್‌ ಹಾಗೂ 2013ರ ಚಾಂಪಿಯನ್ಸ್‌ ಟ್ರೋಫಿ ಹೀಗೇ ಮೂರನ್ನೂ ಗೆದ್ದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆ ಧೋನಿಗಿದೆ.

2007ರಲ್ಲಿ ಮೊದಲ ಬಾರಿ ಭಾರತ ತಂಡದ ನಾಯಕತ್ವ ವಹಿಸಿದ ಎಂ.ಎಸ್‌ ಧೋನಿ 2009ರಲ್ಲಿ ಟೆಸ್ಟ್‌ ಶ್ರೇಯಾಂಕದಲ್ಲಿ ತಂಡವನ್ನು ಅಗ್ರ ಸ್ಥಾನಕ್ಕೇರಿಸಿದ್ದರು. ಕ್ರಿಕೆಟ್‌ನಲ್ಲಿನ ಸಾಧನೆ ಗುರುತಿಸಿದ ಭಾರತ ಸರ್ಕಾರ, ಮಹೇಂದ್ರ ಸಿಂಗ್‌ ಧೋನಿಗೆ 2007ರಲ್ಲಿ ರಾಜೀವ್‌ ಗಾಂಧಿ ಖೇಲ್‌ ರತ್ನ, 2009ರಲ್ಲಿ ಪದ್ಮಶ್ರೀ, ಹಾಗೂ 2018ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 2008 ಮತ್ತು 2009ರಲ್ಲಿ ಸತತ ಎರಡು ಬಾರಿ ವರ್ಷದ ಐಸಿಸಿ ಆಟಗಾರ ಪ್ರಶಸ್ತಿಗೆ ಪಡೆದಿದ್ದಾರೆ.

2014ರಲ್ಲಿ ವೃತ್ತಿ ಜೀವನದ 90ನೇ ಟೆಸ್ಟ್ ಪಂದ್ಯದ ಬಳಿಕ ಎಂಎಸ್‌ ಧೋನಿ ಟೆಸ್ಟ್‌ ತಂಡದ ನಾಯಕತ್ವತೊರೆದರು. 2017ರ ಜನವರಿಯಲ್ಲಿ ಏಕದಿನ ಪಂದ್ಯ ಹಾಗೂ ಟಿ-20 ಕ್ರಿಕೆಟ್‌ ತಂಡದ ನಾಯಕತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಸೀಮಿತ ಓವರ್‌ಗಳ ಎರಡೂ ಮಾದರಿಗಳಲ್ಲಿ ಹೆಚ್ಚು ಪಂದ್ಯಗಳು ಗೆದ್ದ ಭಾರತದ ಮೊದಲ ನಾಯಕ ಎಂಬ ಗೌರವ ಎಂಎಸ್‌ ಧೋನಿಗಿದೆ.

ಇಂಡಿಯನ್‌ ಪ್ರೀಮಿಯರ್ ಲೀಗ್‌ ಆರಂಭವಾದಾಗಿನಿಂದ ಎಂಎಸ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದಲ್ಲಿಯೇ ಆಡುತ್ತಿದ್ದಾರೆ. ಅವರು ಇದರ ನಡುವೆ ಸಿಎಸ್‌ಕೆ ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದ ಈ ಅವಧಿಯಲ್ಲಿ ರೈಸಿಂಗ್‌ ಪುಣೆ ಸೂಪರ್‌ಗೈಂಟ್ಸ್‌ ತಂಡದ ಪರ ಆಡಿದ್ದರು.