* 50ನೇ ವಸಂತಕ್ಕೆ ಕಾಲಿರಿಸಿದ ಸಚಿನ್ ತೆಂಡುಲ್ಕರ್* ಹರಿದುಬಂತು ಶುಭಾಶಯಗಳ ಮಹಾಪೂರ* ಹಲವು ಅಪರೂಪದ ದಾಖಲೆಗಳ ಒಡೆಯ ಮುಂಬೈಕರ್
ನವದೆಹಲಿ(ಏ.24): ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಎಂದು ಪರಿಗಣಿಸಿದರೆ, ಅದಕ್ಕೆ ಸಚಿನ್ ತೆಂಡುಲ್ಕರ್, ದೇವರು ಎನ್ನುವ ಮಾತಿದೆ. 24 ವರ್ಷಗಳ ಕಾಲ ಅಕ್ಷರಶಃ ಕ್ರಿಕೆಟ್ ಜಗತ್ತನ್ನು ಆಳಿದ್ದ ಸಚಿನ್ ತೆಂಡುಲ್ಕರ್, ಇದೀಗ ಜೀವನದ ಅರ್ಧಶತಕ ಪೂರೈಸಿದ್ದಾರೆ. ಏಪ್ರಿಲ್ 24 ಕ್ರಿಕೆಟ್ ದೇವರ ಜನ್ಮದಿನ. ಇಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ವಿಶ್ವ ಕ್ರಿಕೆಟ್ ಕಂಡ ಜಂಟಲ್‌ಮನ್ ಕ್ರಿಕೆಟಿಗ ಎನಿಸಿಕೊಂಡಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಸಚಿನ್ ತೆಂಡುಲ್ಕರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಎಂದಿನಂತೆ ಮತ್ತೊಮ್ಮೆ ವಿನೂತನವಾಗಿ ವಿರೇಂದ್ರ ಸೆಹ್ವಾಗ್, ಲಿಟ್ಲ್ ಮಾಸ್ಟರ್‌ಗೆ ಶುಭಕೋರಿದ್ದಾರೆ.
IPL 2023 ವಾಂಖೇಡೆಯಲ್ಲಿ ಸಚಿನ್ ತೆಂಡುಲ್ಕರ್ ಭರ್ಜರಿ ಹುಟ್ಟುಹಬ್ಬ ಆಚರಣೆ!
ಮೈದಾನದಲ್ಲಿ ನೀವೇನು ಹೇಳುತ್ತಿದ್ದಿರೋ ಅದಕ್ಕೆ ಉಲ್ಟಾ ಆಗಿಯೇ ನಾನು ಮಾಡುತ್ತಿದ್ದೆ. ಇಂದು ನಿಮ್ಮ 50ನೇ ಐತಿಹಾಸಿಕ ಹುಟ್ಟುಹಬ್ಬ. ಹೀಗಾಗಿ ನಾನು ಶಿರಶಾಸನ ಹಾಕಿ ನಿಮಗೆ ಶುಭಾಶಯ ಕೋರುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಸಚಿನ್ ಪಾಜಿ. ನೀವು ಸಾವಿರಾರು ವರ್ಷ ಬಾಳಿ, ವರ್ಷದಲ್ಲಿ ಒಂದು ಕೋಟಿ ದಿನವಿರಲಿ ಎಂದು ವೀರೂ ಶುಭ ಹಾರೈಸಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕವಿವರಣೆಗಾರ ರವಿಶಾಸ್ತ್ರಿ ಟ್ವೀಟ್ ಮಾಡಿ, ಹ್ಯಾಪಿ ಬರ್ತ್ ಡೇ, ಬಿಗ್ ಬಾಸ್.! ದೇವರು ಒಳಿತು ಮಾಡಲಿ ಎಂದು ಸಚಿನ್ ತೆಂಡುಲ್ಕರ್‌ಗೆ ಶಾಸ್ತ್ರಿ ಶುಭ ಹಾರೈಸಿದ್ದಾರೆ.
ಇನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು, ಅದು ಈಡನ್, ಎಂಸಿಜಿ ಅಥವಾ ವಾಂಖೇಡೆಯೇ ಆಗಿರಲಿ, ಎಂದೆಂದಿಗೂ ಸಚಿನ್... ಸಚಿನ್ ಎಂದು ಟ್ವೀಟ್ ಮಾಡಿದೆ.
ಇನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು, 50 ಪೂರೈಸಿದ ಮಾಸ್ಟರ್ ಬ್ಲಾಸ್ಟರ್. ಇದಂತೂ ಐತಿಹಾಸಿಕವಾದದ್ದು ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 34,357 ರನ್ ಬಾರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿರುವ ಸಚಿನ್ ತೆಂಡುಲ್ಕರ್, 201 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿರುವ ತೆಂಡುಲ್ಕರ್, 2011ರ ಭಾರತ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರು ಕೂಡಾ ಹೌದು. ಸಚಿನ್ ತೆಂಡುಲ್ಕರ್ ನೂರ್ಕಾಲ ಬಾಳಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ವತಿಯಿಂದ ಮುಂಬೈಕರ್‌ಗೆ ಜನುಮದಿನದ ಶುಭಾಶಯಗಳು.
