ಸಿಡ್ನಿ(ಡಿ.08): ಬಹುನಿರೀಕ್ಷಿತ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ವೇಗಿ ಇಶಾಂತ್ ಶರ್ಮಾ ಸರಣಿಯಿಂದಲೇ ಹೊರಬಿದ್ದುದ್ದು, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಲಭ್ಯತೆಯ ಬಗ್ಗೆಯೂ ಅನುಮಾನದ ಕಾರ್ಮೋಡ ಕವಿದಿದೆ. ಇದರ ಬೆನ್ನಲ್ಲೇ ತಲೆಗೆ ಪೆಟ್ಟು ಬಿದ್ದಿದ್ದರ ಜತೆಗೆ ಸ್ನಾಯು ಸೆಳೆತದಿಂದ ಬಳಲುತ್ತಿರುವ ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ. ಆಸ್ಟ್ರೇಲಿಯಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದ 50ನೇ ಟೆಸ್ಟ್ ಪಂದ್ಯವನ್ನಾಡುವ ಹೊಸ್ತಿಲಲ್ಲಿರುವ ರವೀಂದ್ರ ಜಡೇಜಾ ಸದ್ಯ ಮೂರು ವಾರಗಳ ಕಾಲ ವಿಶ್ರಾಂತಿಗೆ ಒಳಗಾಗಬೇಕಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಕ್ರೀಡಾಮಾಧ್ಯಮವೊಂದು ವರದಿ ಮಾಡಿದೆ. ಹೀಗಾಗಿ ಡಿಸೆಂಬರ್ 17ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿಯುವ ಸಾಧ್ಯತೆಯಿದೆ.

ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಹಗಲು-ರಾತ್ರಿಯ ಟೆಸ್ಟ್‌ ಪಂದ್ಯ ಇದಾಗಿರಲಿದೆ. ಭಾರತದ ಸ್ಟಾರ್ ಆಲ್ರೌಂಡರ್ ಆಗಿರುವ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ಮೊದಲ ಟೆಸ್ಟ್‌ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸ್ಯಾಯು ಸೆಳೆತದ ಪ್ರಮಾಣ ದೊಡ್ಡದಿದ್ದರೆ, ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್‌ಗೂ ರವೀಂದ್ರ ಜಡೇಜಾ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಟೀಂ ಇಂಡಿಯಾಗೆ ಶಾಕ್; ರವೀಂದ್ರ ಜಡೇಜಾ ಟಿ20 ಸರಣಿಯಿಂದ ಔಟ್..!

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ಬಲಿಷ್ಠ ಆಸ್ಟ್ರೇಲಿಯಾ ಎದುರು ವಿರಾಟ್ ಪಡೆ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವ ಕುತೂಹಲ ಜೋರಾಗಿದೆ.