Asianet Suvarna News Asianet Suvarna News

ಟೀಂ ಇಂಡಿಯಾಗೆ ಶಾಕ್; ರವೀಂದ್ರ ಜಡೇಜಾ ಟಿ20 ಸರಣಿಯಿಂದ ಔಟ್..!

ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದ ಗೆಲುವಿನ ರೂವಾರಿ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ  

Ravindra Jadeja ruled out of T20I series against Australia Thakur added to Team India squad kvn
Author
Canberra ACT, First Published Dec 5, 2020, 3:44 PM IST

ಕ್ಯಾನ್‌ಬೆರ್ರಾ(ಡಿ.05): ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ದದ ಇನ್ನುಳಿದ ಎರಡು ಟಿ20 ಪಂದ್ಯಗಳಿಂದ ಹೊರಬಿದ್ದಿದ್ದು, ಅವರ ಬದಲಿಗೆ ಮಧ್ಯಮ ವೇಗದ ಬೌಲರ್ ಶಾರ್ದೂಲ್ ಠಾಕೂರ್ ತಂಡ ಕೂಡಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಬೌನ್ಸರ್, ಸೌರಾಷ್ಟ್ರ ಮೂಲದ ಜಡೇಜಾ ತಲೆಗೆ ಅಪ್ಪಳಿಸಿತ್ತು. ಹೀಗಾಗಿ ಫೀಲ್ಡಿಂಗ್ ಮಾಡಲು ರವೀಂದ್ರ ಜಡೇಜಾ ಕಣಕ್ಕಿಳಿದಿರಲಿಲ್ಲ. ಜಡೇಜಾ ಬದಲಿಗೆ ಕನ್ಕಶನ್ ಸಬ್‌ಸ್ಟಿಟ್ಯೂಟ್‌ ಆಗಿ ಯುಜುವೇಂದ್ರ ಚಹಲ್ ಕಣಕ್ಕಿಳಿದಿದ್ದರು. ಮಾತ್ರವಲ್ಲದೇ ಆಸ್ಟ್ರೇಲಿಯಾ ವಿರುದ್ದ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಚಹಲ್ ಭಾಜನರಾಗಿದ್ದರು.

ಕ್ಯಾನ್‌ಬೆರ್ರಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ರವೀಂದ್ರ ಜಡೇಜಾ ಕೇವಲ 23 ಎಸೆತಗಳಲ್ಲಿ ಅಜೇಯ 44 ರನ್ ಬಾರಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಆಸ್ಟ್ರೇಲಿಯಾ ವಿರುದ್ದದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಜಡೇಜಾ ಹೆಲ್ಮೆಟ್‌ಗೆ ಸ್ಟಾರ್ಕ್‌ ಹಾಕಿದ ಬೌನ್ಸರ್ ಬಲವಾಗಿ ಬಡಿದಿತ್ತು.

ಜಡ್ಡು ಬದಲಿಗೆ ಚಹಲ್ ಬೌಲಿಂಗ್ ಮಾಡಿದ್ದೇಕೆ..? ಐಸಿಸಿ ಕನ್ಕಶನ್ ನಿಯಮವೇನು ಹೇಳುತ್ತೆ..?

ಆ ಬಳಿಕ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ರವೀಂದ್ರ ಜಡೇಜಾ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿತು. ಆಗ ಜಡೇಜಾ ಫೀಲ್ಡಿಂಗ್‌ ಮಾಡಲು ಸಂಪೂರ್ಣ ಫಿಟ್‌ ಇಲ್ಲ ಎಂದು ಅರಿವಿಗೆ ಬರುತ್ತಿದ್ದಂತೆ ಮ್ಯಾಚ್‌ ರೆಫ್ರಿ ಡೇವಿಡ್ ಬೂನ್ ಬಳಿ ಟೀಂ ಇಂಡಿಯಾ ಕನ್ಕಶನ್ ಸಬ್‌ಸ್ಟಿಟ್ಯೂಟ್‌ ಮೊರೆ ಹೋಯಿತು. ರೆಫ್ರಿ ಭಾರತದ ಮನವಿಯನ್ನು ಪುರಸ್ಕರಿಸಿ ಜಡೇಜಾ ಬದಲಿಗೆ ಯುಜುವೇಂದ್ರ ಚಹಲ್‌ಗೆ ಬೌಲಿಂಗ್ ಮಾಡಲು ಅವಕಾಶ ನೀಡಿತು. ಲೆಗ್‌ಸ್ಪಿನ್ನರ್ ಚಹಲ್ 4 ಓವರ್‌ ಬೌಲಿಂಗ್ ಮಾಡಿ ಕೇವಲ 25 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ರವೀಂದ್ರ ಜಡೇಜಾ ಸದ್ಯ ವೈದ್ಯಕೀಯ ನಿಗಾದಲ್ಲಿದ್ದು, ಅಗತ್ಯವಿದ್ದರೆ ಶನಿವಾರ ಮತ್ತೊಮ್ಮೆ  ಸ್ಕ್ಯಾನ್‌ ಮಾಡಲು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಚಿಂತನೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios