ಲವ್ ಜಿಹಾದ್ ಪೋಸ್ಟ್ ಶೇರ್ ಮಾಡಿದ ಯಶ್ ದಯಾಳ್, ಕಾಮೆಂಟ್ಸ್ ಕಂಡು ಡಿಲೀಟ್..!
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ವಿವಾದ ಮೈಮೇಲೆಳೆದುಕೊಂಡ ಯಶ್ ದಯಾಳ್
ಯಶ್ ದಯಾಳ್ ಗುಜರಾತ್ ಟೈಟಾನ್ಸ್ ತಂಡದ ಎಡಗೈ ವೇಗಿ
ಲವ್ ಜಿಹಾದ್ ಕುರಿತು ಪೋಸ್ಟ್ ಮಾಡಿ ಬಳಿಕ ಕ್ಷಮೆ ಕೋರಿದ ವೇಗಿ
ನವದೆಹಲಿ(ಜೂ.05): ರಿಂಕು ಸಿಂಗ್ ಎದುರು 5 ಎಸೆತಗಳಲ್ಲಿ 5 ಸಿಕ್ಸರ್ ಚಚ್ಚಿಸಿಕೊಂಡ ಗುಜರಾತ್ ಟೈಟಾನ್ಸ್ ಎಡಗೈ ವೇಗಿ ಯಶ್ ದಯಾಳ್ ಯಾರಿಗೆ ಗೊತ್ತಿಲ್ಲ ಹೇಳಿ?. ಅದೇ ಯಶ್ ದಯಾಳ್ ಇದೀಗ ಲವ್ ಜಿಹಾದ್ ಕುರಿತಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ತಾವು ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ಆ ಪೋಸ್ಟ್ ಡಿಲೀಟ್ ಮಾಡಿ, ಕ್ಷಮೆ ಯಾಚಿಸಿದ್ದಾರೆ.
ಹೌದು, ಗುಜರಾತ್ ಟೈಟಾನ್ಸ್ ತಂಡದ ಎಡಗೈ ವೇಗಿ ಯಶ್ ದಯಾಳ್ ಇತ್ತೀಚೆಗಷ್ಟೇ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಸಾಕ್ಷಿ ಎನ್ನುವ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆಕೆಯ ಬಾಯ್‌ಫ್ರೆಂಡ್ ಸಾಹಿಲ್ ಖಾನ್ ಹೋಲಿಕೆಯ ಡೆಲ್ಲಿ ಮರ್ಡರ್ ಕೇಸ್ ಕುರಿತಾದ ಪೋಸ್ಟ್‌ವೊಂದರನ್ನು ಯಶ್ ದಯಾಳ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದರು.
ಇದು ಯಶ್ ದಯಾಳ್ ಮಾಡಿರುವ ಪೋಸ್ಟ್ ಆಗಿದ್ದು, ಈ ಕುರಿತಂತೆ ನೆಟ್ಟಿಗರು ಯಶ್ ದಯಾಳ್ ಅವರ ಈ ಪೋಸ್ಟ್ ಕುರಿತಂತೆ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದರು. ಅಭಿಷೇಕ್ ಭಕ್ಷಿ ಎನ್ನುವವರು ಟ್ವೀಟ್ ಮಾಡಿ, ಬಿಸಿಸಿಐ ಹಾಗೂ ಗುಜರಾತ್ ಟೈಟಾನ್ಸ್ ತಂಡವನ್ನು ಟ್ಯಾಗ್ ಮಾಡಿ ಈತನ ವಿರುದ್ದ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಇನ್ನು ಹಲವು ನೆಟ್ಟಿಗರು ಯಶ್ ದಯಾಳ್ ಅವರ ಮನಸ್ಥಿತಿಯನ್ನು ಟೀಕಿಸಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಯಶ್ ದಯಾಳ್, ಇನ್‌ಸ್ಟಾಗ್ರಾಂನಲ್ಲಿ ತಾವು ಈ ಮೊದಲು ಹಂಚಿಕೊಂಡಿದ್ದ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದಷ್ಟೇ ಅಲ್ಲದೇ ನೆಟ್ಟಿಗರಲ್ಲಿ ಕ್ಷಮೆಯಾಚಿಸಿದ್ದಾರೆ. "ಸ್ನೇಹಿತರೇ, ಮಿಸ್ಟೇಕ್ ಆಗಿ ನಾನು ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೋರುತ್ತಿದ್ದೇನೆ. ದಯವಿಟ್ಟು ದ್ವೇಷವನ್ನು ಹರಡಬೇಡಿ. ಧನ್ಯವಾದಗಳು. ನಾನು ಎಲ್ಲಾ ಸಮುದಾಯಗಳ ಭಾವನೆಗಳನ್ನು ಗೌರವಿಸುತ್ತೇನೆ ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಏನಿದು ಸಾಕ್ಷಿ-ಸಾಹಿಲ್ ಡೆಲ್ಲಿ ಮರ್ಡರ್ ಕೇಸ್?:
20 ವರ್ಷದ ಸಾಹಿಲ್ ಖಾನ್ ಎನ್ನುವ ಯುವಕನೊಬ್ಬ ತನ್ನ ಪ್ರೇಯಸಿಯನ್ನು 20ಕ್ಕೂ ಹೆಚ್ಚು ಬಾರಿ ಇರಿದು ಅಮಾನುಷವಾಗಿ ಹತ್ಯೆ ಮಾಡಿದ ಘಟನೆಯೊಂದು ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ನಡೆದಿದೆ.
ತನ್ನ ಪರಿಚಿತರಾದ ನೀತು ಎಂಬುವವರ ಮಗಳ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಬಟ್ಟೆ ಖರೀದಿಗಾಗಿ 16 ವರ್ಷದ ಸಾಕ್ಷಿ ಸಂಜೆ ಅಂಗಡಿಗೆ ಹೋಗುತ್ತಿದ್ದ ವೇಳೆ ಆಕೆಯ ಪ್ರಿಯಕರ ಸಾಹಿಲ್ ಅಕೆಯನ್ನು ಕಾಲುದಾರಿಯೊಂದರಲ್ಲಿ ಅಡ್ಡಗಟ್ಟಿದ್ದಾನೆ. ಬಳಿಕ ಏಕಾಏಕಿ ಆಕೆಯನ್ನು ಗೋಡೆಗೆ ಒತ್ತಿಹಿಡಿದು ಹಲವು ಬಾರಿ ಚೂರಿಯಿಂದ ಇರಿದಿದ್ದಾನೆ. ಇರಿತದ ತೀವ್ರತೆಗೆ ಚೂರಿ ತಲೆಯಲ್ಲೇ ಸಿಕ್ಕಿಹಾಕಿಕೊಂಡರೂ ಬಿಡದೆ ಮತ್ತೆ ಹೊರಗೆಳೆದು ಇರಿದಿದ್ದಾನೆ. ಈ ಆಘಾತ ತಾಳಲಾದರೆ ಸಾಕ್ಷಿ ಕುಸಿದುಬಿದ್ದ ಮೇಲೆ ಸಮೀಪದಲ್ಲೇ ಇದ್ದ ಸಿಮೆಂಟ್ ಸ್ಲ್ಯಾಬ್ ಅನ್ನು ಹಲವು ಬಾರಿ ಆಕೆಯ ತಲೆ ಮತ್ತು ದೇಹದ ಮೇಲೆ ಕುಕ್ಕಿ ವಿಕೃತಿ ಮೆರೆದು ಏನೂ ಆಗಿಲ್ಲವೆಂದು ಅಲ್ಲಿಂದ ತೆರಳಿದ್ದಾನೆ. ಹೀಗೆ ತೆರಳಿದ ಮರುಕ್ಷಣದಲ್ಲೇ ಮತ್ತೆ ಘಟನಾ ಸ್ಥಳಕ್ಕೆ ಮರಳಿ ಸಾಕ್ಷಿ ಮೇಲೆ ಮತ್ತೊಮ್ಮೆ ಸ್ಲ್ಯಾಬ್ ಕುಕ್ಕಿ ಹೋಗಿದ್ದಾನೆ. ಘಟನೆಯಲ್ಲಿ ಸಾಕ್ಷಿ ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ್ದಾಳೆ. ದಾಳಿ ವೇಳೆ ಆಕೆಯ ತಲೆಯ ಭಾಗ ಹೊರಬಂದಿದ್ದು, ಸ್ಥಳದಲ್ಲಿ ಭೀಕರ ವಾತಾವರಣ ಸೃಷ್ಟಿಯಾಗಿತ್ತು.ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
"ದಾದಾ ವಾಷ್ ರೂಂಗೆ ಹೋದಾಗ..": ಪ್ರಾಂಕ್ ಮಾಡಿದ ಸಚಿನ್-ಸೆಹ್ವಾಗ್ ಕಿಲಾಡಿ ಜೋಡಿ..!
ಉತ್ತರಪ್ರದೇಶ ಮೂಲದ 25 ವರ್ಷದ ಯುವವೇಗಿ ಯಶ್ ದಯಾಳ್ ಅವರನ್ನು ಕಳೆದ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 3.2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2022ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಯಶ್ ದಯಾಳ್ 11 ವಿಕೆಟ್ ಕಬಳಿಸುವ ಮೂಲಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 5 ವಿಕೆಟ್ ರೋಚಕ ಸೋಲು ಅನುಭವಿಸುವ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್‌ಗೆ ಮುತ್ತಿಕ್ಕುವ ಅವಕಾಶ ವಂಚಿತವಾಯಿತು.