ನವದೆಹಲಿ(ಏ.20): ಜಾಗತಿಕ ಕ್ರೀಡಾ  ಉತ್ಪನ್ನಗಳ ಬ್ರ್ಯಾಂಡ್‌ ಎನಿಸಿಕೊಂಡಿರು ಪೂಮಾ ಜತೆ ದೀರ್ಘಕಾಲಿಕ ಒಪ್ಪಂದಕ್ಕೆ ಯುವ ಪ್ರತಿಭಾನ್ವಿತ ಕ್ರಿಕೆಟಿಗರಾದ ದೇವದತ್ ಪಡಿಕ್ಕಲ್‌ ಹಾಗೂ ವಾಷಿಂಗ್ಟನ್ ಸುಂದರ್ ಸಹಿ ಹಾಕಿದ್ದಾರೆ. 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಈ ಇಬ್ಬರು ಕ್ರಿಕೆಟಿಗರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ವಾಷಿಂಗ್ಟನ್ ಸುಂದರ್ ಹಾಗೂ ದೇವದತ್ ಪಡಿಕ್ಕಲ್‌ ಇದೀಗ ಪೂಮಾ ಜತೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಸುಷ್ಮಾ ವರ್ಮಾ ಸಾಲಿಗೆ ಸೇರಿದ್ದಾರೆ.

ಮಹತ್ವದ ಕ್ರಿಕೆಟ್‌ ಸರಣಿಗಳಲ್ಲಿ ವಾಷಿಂಗ್ಟನ್ ಸುಂದರ್‌ ಹಾಗೂ ದೇವದತ್ ಪಡಿಕ್ಕಲ್‌ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ವಾಷಿಂಗ್ಟನ್ ಸುಂದರ್ ತಮ್ಮ ಆಲ್ರೌಂಡ್‌ ಪ್ರದರ್ಶನದ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಲು ತಮ್ಮದೇ ಆದ ಕಾಣಿಕೆ ನೀಡಿದ್ದರು. ಇನ್ನು ಕರ್ನಾಟಕದ ದೇವದತ್ ಪಡಿಕ್ಕಲ್‌, ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಐಪಿಎಲ್‌ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದರು. 

ಐಪಿಎಲ್ 2021: ಸಕಾರಿಯಾ ಜೀವಮಾನದ ಕನಸು ನನಸು ಮಾಡಿದ ಧೋನಿ

ನಾವು ಭಾರತದ ಯುವ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಉತ್ತೇಜಿಸಲು ಬದ್ಧರಾಗಿದ್ದೇವೆ. ವಾಷಿಂಗ್ಟನ್ ಸುಂದರ್ ಹಾಗೂ ದೇವದತ್ ಪಡಿಕ್ಕಲ್‌ ಈಗಾಗಲೇ ಮೈದಾನದಲ್ಲಿ ಅತ್ಯದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ನಾವು ದಿಗ್ಗಜ  ಆಟಗಾರರನ್ನು ಮಾತ್ರ ಬೆಂಬಲಿಸುವುದಿಲ್ಲ, ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಯುವ ಆಟಗಾರರಿಗೂ ನೆರವಾಗುತ್ತಿದ್ದೇವೆ. ಆರಂಭಿಕ ಹಂತದಲ್ಲೇ ಇಂತಹ ಯುವ ಆಟಗಾರರನ್ನು ಬೆಳೆಸುವ ಮೂಲಕ ಭಾರತದ ಕ್ರೀಡಾ ವಾತಾವರಣವನ್ನು ಮತ್ತಷ್ಟು ಬಲಿಷ್ಠರನ್ನಾಗಿಸುತ್ತಿದ್ದೇವೆ ಎಂದು ಪೂಮಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್‌ ಗಂಗೂಲಿ ಹೇಳಿದ್ದಾರೆ.

ಪೂಮಾ ಜತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಆರ್‌ಸಿಬಿ ಯುವ ಕ್ರಿಕೆಟಿಗರಾದ ದೇವದತ್ ಪಡಿಕ್ಕಲ್ ಹಾಗೂ ವಾಷಿಂಗ್ಟನ್ ಸುಂದರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.