ಕಳೆದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಆಫ್ಘಾನಿಸ್ತಾನ ಎದುರು ಅವಿಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ.

ಮೆಲ್ಬರ್ನ್‌(ಡಿ.06): ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ 2021ರಿಂದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. 2023ರ ಮ್ಯಾಕ್ಸ್‌ವೆಲ್ ಪಾಲಿಗೆ ಅವಿಸ್ಮರಣೀಯವೆನಿಸಿಕೊಂಡಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ಮ್ಯಾಕ್ಸ್‌ವೆಲ್ ಪಾಲಾಗಿದೆ. ಹೀಗಿರುವಾಗಲೇ ಆರ್‌ಸಿಬಿ ಅಭಿಮಾನಿಗಳಿಗೆ ಗ್ಲೆನ್‌ ಮ್ಯಾಕ್ಸ್‌ವೆಲ್ ಗುಡ್‌ ನ್ಯೂಸ್ ನೀಡಿದ್ದು, ತಾವು ಎಲ್ಲಿಯವರೆಗೆ ನಡೆಯಲು ಆಗುತ್ತದೆಯೋ ಅಲ್ಲಿಯವರೆಗೆ ಐಪಿಎಲ್ ಆಡುವುದಾಗಿ ಘೋಷಿಸಿದ್ದಾರೆ. 

ಕಳೆದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಆಫ್ಘಾನಿಸ್ತಾನ ಎದುರು ಅವಿಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಆಫ್ಘಾನಿಸ್ತಾನ ನೀಡಿದ್ದ 292 ರನ್ ಗುರಿ ಬೆನ್ನತ್ತಿದ್ದ ಆಸೀಸ್ ಒಂದು ಹಂತದಲ್ಲಿ ಕೇವಲ 91 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖಮಾಡಿತ್ತು. ಈ ಸಂದರ್ಭದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ್ದ ಮ್ಯಾಕ್ಸ್‌ವೆಲ್ ಅಜೇಯ 201 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಮ್ಯಾಕ್ಸ್‌ವೆಲ್ ಅವರು ಫೈನಲ್‌ನಲ್ಲೂ ಭಾರತದ ಎದುರು ಗೆಲುವಿನ ರನ್ ಬಾರಿಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

ಹಾರ್ದಿಕ್ ಫಿಟ್ನೆಸ್ ಮೇಲೆ BCCI ಫುಲ್ ಫೋಕಸ್: 18 ವಾರ NCAನಲ್ಲೇ ಠಿಕಾಣಿ ಹೂಡಲಿದ್ದಾರೆ ಪಾಂಡ್ಯ..!

ಇನ್ನು 2021ರಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡ ಬಳಿಕ ಮ್ಯಾಕ್ಸ್‌ವೆಲ್ ಖದರ್ ಬೇರೆಯದ್ದೇ ಹಂತಕ್ಕೆ ತಲುಪಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಮ್ಯಾಕ್ಸಿ, ಬೆಂಗಳೂರು ಪಡೆ ಕೂಡಿಕೊಂಡ ಮೇಲೆ ಮೈಚಳಿಬಿಟ್ಟು ಬ್ಯಾಟ್ ಬೀಸಲಾರಂಭಿಸಿದ್ದಾರೆ. ಸದ್ಯದ ಮ್ಯಾಕ್ಸ್‌ವೆಲ್ ಫಾರ್ಮ್‌ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಹುರುಪು ನೀಡಿದೆ.

ವಿಶ್ವಕಪ್ ಮುಗಿದ ಬಳಿಕ ಮ್ಯಾಕ್ಸ್‌ವೆಲ್ ಇದೀಗ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಮೆಲ್ಬೊರ್ನ್ ಸ್ಟಾರ್ಸ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. "ಐಪಿಎಲ್ ನಾನು ಆಡಲಿರುವ ಕೊನೆಯ ಟೂರ್ನಮೆಂಟ್ ಆಗಿರಲಿದೆ. ಎಲ್ಲಿಯವರೆಗೂ ನಾನು ನಡೆಯಲು ಸಾಧ್ಯವೋ ಅಲ್ಲಿಯವರೆಗೂ ಕ್ರಿಕೆಟ್ ಆಡುತ್ತೇನೆ" ಎಂದು ಮೆಲ್ಬೊರ್ನ್ ಏರ್‌ಪೋರ್ಟ್‌ನಲ್ಲಿ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

"ನನ್ನ ಕ್ರಿಕೆಟ್ ಬೆಳವಣಿಗೆಯಲ್ಲಿ ಐಪಿಎಲ್‌ನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಲ್ಲಿ ನಾನು ಭೇಟಿಯಾದ ಜನಗಳು, ಕೋಚ್‌ಗಳು, ಅಂತಾರಾಷ್ಟ್ರೀಯ ಕ್ರಿಕೆಟಿಗರ ಒಡನಾಟವು ನನ್ನ ಕ್ರಿಕೆಟ್ ಬೆಳವಣಿಗೆಗೆ ಹೆಚ್ಚು ಅನುಕೂಲವನ್ನುಂಟು ಮಾಡಿದೆ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

IPL Auction 2024: ಈ ಬಾರಿ ₹20 ಕೋಟಿಗೆ ಹರಾಜಾಗ್ತಾರಾ ಈ ಆಸೀಸ್ ಕ್ರಿಕೆಟಿಗ..?

"ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರ ಜತೆ ಎರಡು ತಿಂಗಳು ಹೆಗಲಿಗೆ ಹೆಗಲು ಕೊಡುವುದು, ಬೇರೆ ಪಂದ್ಯಗಳ ಬಗ್ಗೆ ಮಾಡುವುದು ನಿಜಕ್ಕೂ ಕ್ರಿಕೆಟ್ ಕಲಿಕೆ ವಿಚಾರದಲ್ಲಿ ಎಂತಹ ಆಟಗಾರನಿಗೂ ಅತಿದೊಡ್ಡ ಅನುಭವವಾಗಿದೆ' ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ. 

2024ರ ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 11 ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿದೆ. ಆದರೆ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಫಾಫ್ ಡು ಪ್ಲೆಸಿಸ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. 2024ರ ಐಪಿಎಲ್ ಆಟಗಾರರ ಹರಾಜು ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ.