ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸೆಲೆಕ್ಟ್ ಮಾಡಿದ ಗೌತಮ್ ಗಂಭೀರ್..! ಇಬ್ಬರು ಸ್ಟಾರ್ ಆಟಗಾರರಿಗಿಲ್ಲ ಸ್ಥಾನ
2023ರ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
ಇಂದು ಭಾರತ ಕ್ರಿಕೆಟ್ ತಂಡ ಪ್ರಕಟವಾಗುವ ಸಾಧ್ಯತೆ
ವಿಶ್ವಕಪ್‌ಗೆ ತಮ್ಮ ನೆಚ್ಚಿನ ಭಾರತ ತಂಡ ಹೆಸರಿಸಿದ ಗೌತಮ್ ಗಂಭೀರ್
ನವದೆಹಲಿ(ಸೆ.05): ಮುಂಬರುವ ಅಕ್ಟೋಬರ್ 05ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಕೆಲವೇ ಗಂಟೆಗಳಲ್ಲಿ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟವಾಗಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವಿಶ್ವಕಪ್ ಹೀರೋ ಗೌತಮ್ ಗಂಭೀರ್, 2023ರ ವಿಶ್ವಕಪ್ ಟೂರ್ನಿಗೆ ತಮ್ಮ ನೆಚ್ಚಿನ ಭಾರತ ಕ್ರಿಕೆಟ್ ತಂಡವನ್ನು ಹೆಸರಿಸಿದ್ದಾರೆ.
ಭಾರತ ಕ್ರಿಕೆಟ್ ತಂಡವು ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಅನುಭವಿಸುತ್ತಾ ಬಂದಿದೆ. 2011ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು. ಇದಾದ ಬಳಿಕ 2013ರಲ್ಲಿ ಧೋನಿ ನೇತೃತ್ವದಲ್ಲೇ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಬೀಗಿತ್ತು. ಇದಾದ ಬಳಿಕ 10 ವರ್ಷ ಕಳೆದರೂ ಭಾರತ ಕ್ರಿಕೆಟ್ ತಂಡವು ಐಸಿಸಿ ಟ್ರೋಫಿ ಗೆಲ್ಲಲು ಪದೇ ಪದೇ ವಿಫಲವಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಶತಾಯಗತಾಯ ಐಸಿಸಿ ಟ್ರೋಫಿ ಗೆದ್ದೇ ತೀರುವ ಛಲ ತೊಟ್ಟಿದೆ.
World Cup 2023: ವಿಶ್ವಕಪ್ ಟೂರ್ನಿಗೆ ಇಂದೇ ಭಾರತ ತಂಡ ಪ್ರಕಟ..? ರೋಹಿತ್ ಪಡೆಯಲ್ಲಿ ಯಾರಿಗೆಲ್ಲಾ ಸ್ಥಾನ?
ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗೌತಮ್ ಗಂಭೀರ್ ಇದೀಗ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಹೆಸರಿಸಿದ್ದು, ಯುವ ಹಾಗೂ ಅನುಭವಿ ಆಟಗಾರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ಅಚ್ಚರಿ ಎನ್ನುವಂತೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಹಾಗೂ ಶಾರ್ದೂಲ್ ಠಾಕೂರ್ ಅವರಂತಹ ಸ್ಟಾರ್ ಆಟಗಾರರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿಲ್ಲ ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ನೇಪಾಳ ನಡುವಿನ ಪಂದ್ಯದ ವೇಳೆ ಗೌತಮ್ ಗಂಭೀರ್ ಇದೀಗ ತಮ್ಮ ನೆಚ್ಚಿನ ಭಾರತ ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಪದೇ ಪದೇ ವಿಫಲವಾಗುತ್ತಾ ಬಂದಿರುವ ಸೂರ್ಯಕುಮಾರ್ ಯಾದವ್‌ಗೂ ಗೌತಮ್ ಗಂಭೀರ್ ಆಯ್ಕೆ ಮಾಡಿಕೊಂಡ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಕೊಹ್ಲಿ ಪರ ಘೋಷಣೆಗೆ ಉರಿದು ಬಿದ್ದ ಗಂಭೀರ್, ಮಧ್ಯದ ಬೆರಳು ತೋರಿಸಿ ಸಂಸದನ ಅಸಭ್ಯ ನಡೆ!
ಇನ್ನು ಏಷ್ಯಾಕಪ್ ಮೂಲಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಲಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಲ್ರೌಂಡರ್ ವಿಭಾಗದಲ್ಲಿ ರವೀಂದ್ರ ಜಡೇಜಾ ಹಾಗೂ ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಜತೆಗೆ ತಮಿಳುನಾಡು ಮೂಲದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹಾಗೂ ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಏಷ್ಯಾಕಪ್ ಆಡುತ್ತಿರುವ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟಿದ್ದಾರೆ
ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ತ್ರಿವಳಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಕಲ್ಪಿಸಿದ್ದಾರೆ. ಇದರ ಜತೆಗೆ ತಜ್ಞ ಸ್ಪಿನ್ನರ್ ರೂಪದಲ್ಲಿ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್ ಟೂರ್ನಿಗೆ ಗಂಭೀರ್ ಆಯ್ಕೆ ಮಾಡಿದ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ.