ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಉಚಿತ ಶಿಕ್ಷಣ ಜವಾಬ್ದಾರಿ ಹೊತ್ತ ಗೌತಮ್ ಗಂಭೀರ್!
ಪೂರ್ವ ದೆಹಲಿ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಮಕ್ಕಳ ಶಿಕ್ಷಣ ವಿಚಾರದಲ್ಲಿ ಹಲವು ಭಾರಿ ತಮ್ಮ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ಗಂಭೀರ್, ಇದೀಗ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಗೌತಮ್ ಗಂಭೀರ್ ವಹಿಸಿಕೊಂಡಿದ್ದಾರೆ.
ನವದೆಹಲಿ(ಜು.31): ಟೀಂ ಇಂಡಿಯಾ ಕ್ರಿಕೆಟಿಗನಾಗಿ, ಮಾಜಿ ಕ್ರಿಕೆಟಿಗನಾಗಿ, ಇದೀಗ ಬಿಜೆಪಿ ಸಂಸದನಾಗಿ ಗೌತಮ್ ಗಂಭೀರ್ ಎಲ್ಲರ ಗಮನಸೆಳೆದಿದ್ದಾರೆ. ನೇರ ನುಡಿಯಿಂದಲೇ ಹಲವು ವಿರೋಧಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಗಂಭೀರ್ ಸಾಮಾಜಿಕ ಕಾರ್ಯಗಳ ವಿಚಾರದಲ್ಲಿ ಎಲ್ಲರೂ ಗಂಭೀರ್‌ನನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೀಗ ಗೌತಮ್ ಗಂಭೀರ್ ದೆಹಲಿಯಲ್ಲಿ ಸೆಕ್ಸ್ ವರ್ಕರ್ಸ್ ಪುತ್ರಿಯರಿಗೆ ಉಚಿತ ಶಿಕ್ಷಣ ಹಾಗೂ ಅವರ ಎಲ್ಲಾ ಖರ್ಚು ವೆಚ್ಚದ ಜವಾಬ್ದಾರಿಯನ್ನು ಗಂಬೀರ್ ವಹಿಸಿಕೊಂಡಿದ್ದಾರೆ.
ಫಲಿಸಲಿಲ್ಲ ಪ್ರಾರ್ಥನೆ, ಕುಟುಂಬ ಸದಸ್ಯರಂತೆ ಕೈಯಾರೆ ಅಂತ್ಯಕ್ರಿಯೆ ಮಾಡಿದ ಗಂಭೀರ್!
ದೆಹಲಿಯ ಜಿಬಿ ರೋಡ್‌ನಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಪುತ್ರಿಯರ ಶಿಕ್ಷಣ, ಅವರ ಖರ್ಚು ವೆಚ್ಚವನ್ನು ಗಂಭೀರ್ ನೋಡಿಕೊಳ್ಳಲಿದ್ದಾರೆ. ಪಂಖ್ ಅನ್ನೋ ವಿನೂತನ ಕಾರ್ಯಕ್ರಮದಡಿ ಗಂಭೀರ್ ಮೊದಲ ಹಂತದಲ್ಲಿ 25 ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಅವರ ಜೀವನದ ಖರ್ಚು ವೆಚ್ಚ ಹಾಗೂ ಅವರಿಗೂ ಸೂಕ್ತ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಗಂಭೀರ್ ಮಾಡಿದ್ದಾರೆ.
ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!
ಈ ಸಮಾಜದಲ್ಲಿ ಪ್ರತಿಯೊಬ್ಬರಿಗೆ ಗೌರವಯುತವಾಗಿ ಜೀವನ ನಡೆಸಲು ಹಕ್ಕಿದೆ. ಹಲವು ಕಾರಣಗಳಿಂದ ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಇತರ ಮಕ್ಕಳಂತೆ ಗೌರವಯುತ ಜೀವನಕ್ಕೆ ಈ ಹೆಣ್ಣು ಮಕ್ಕಳಿಗೂ ಸಿಗಬೇಕು. ಅವರ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಬೇಕು. ಇದಕ್ಕಾಗಿ ಈ ಯೋಜನೆಯಡಿ ವಿಶೇಷವಾಗಿ ಸೆಕ್ಸ್ ವರ್ಕರ್ ಪುತ್ರಿಯರ ಶಿಕ್ಷಣಕ್ಕೆ ನೆರವಾಗಲಿದ್ದೇನೆ ಎಂದು ಗಂಭೀರ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಈ ಯೋಜನೆಯಡಿ ಮತ್ತಷ್ಟು ಮಕ್ಕಳನ್ನು ಸೇರಿಸಿಕೊಳ್ಳಲಾಗುವುದು ಎಂದು ಗಂಭೀರ್ ಹೇಳಿದ್ದಾರೆ. 5 ರಿಂದ 18 ವರ್ಷದ ಹೆಣ್ಣು ಮಕ್ಕಳ ಶಿಕ್ಷಣ ಸೇರಿದಂತೆ ಜೀವನದ ಸಂಪೂರ್ಣ ಜವಾಬ್ದಾರಿಯನ್ನು ಗಂಭೀರ್ ನಿರ್ವಹಿಸಲಿದ್ದಾರೆ. ಹಲವು ಲೈಂಗಿಕ ಕಾರ್ಯಕರ್ತೆಯರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಶಾಲಾ ಮಟ್ಟದಲ್ಲಿ ತಾಯಂದಿರ ಲೈಂಗಿಕ ಕೆಲಸದಿಂದ ಮಕ್ಕಳು ಶಾಲೆ ತೊರೆಯುತ್ತಾರೆ. ಹೀಗಾಗಿ ಅವರ ಕನಸುಗಳೆಲ್ಲಾ ನುಚ್ಚಿ ನೂರಾಗಿ ಹೋಗುತ್ತಿದೆ. ಹಲವು ಮಕ್ಕಳು ದೊಡ್ಡವರಾಗಿ ಮತ್ತೆ ತಮ್ಮ ತಾಯಿಂದರಿ ಕೆಲಸಕ್ಕೆ ಕೈಹಾಕಿದ ಉದಾಹರಣೆಗಳು ಸಾಕಷ್ಟಿವೆ. ಇದು ನಿಲ್ಲಬೇಕು ಎಂದು ಗಂಭೀರ್ ಹೇಳಿದ್ದಾರೆ. ಗಂಭೀರ್ ಫೌಂಡೇಶನ್ ಈಗಾಗಲೇ ಹುತಾತ್ಮ ಯೋಧರ 200 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ.