ಹೀಥ್ ಸ್ಟ್ರೀಕ್‌, ಜಿಂಬಾಬ್ವೆ ಕ್ರಿಕೆಟ್ ಕಂಡ ದಿಗ್ಗಜ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇನ್ನು 2000ದಿಂದ 2004ರ ವರೆಗೆ ನಾಯಕನಾಗಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಜಿಂಬಾಬ್ವೆ ಪರ 12 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 65 ಟೆಸ್ಟ್ ಹಾಗೂ 189 ಏಕದಿನ ಪಂದ್ಯಗಳನ್ನಾಡಿದ್ದರು. ಹಲವಾರು ಬಾರಿ ಏಕಾಂಗಿಯಾಗಿ ಜಿಂಬಾಬ್ವೆ ತಂಡವನ್ನು ಗೆಲುವಿನ ದಡ ಸೇರಿಸಿದ ಹೆಗ್ಗಳಿಕೆ ಹೀಥ್ ಸ್ಟ್ರೀಕ್‌ ಅವರಿಗಿದೆ.

ಹರಾರೆ(ಸೆ.03): ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀಥ್ ಸ್ಟ್ರೀಕ್‌ ಇಂದು(ಸೆ.03) ತಮ್ಮ 49ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ಈ ವಿಚಾರವನ್ನು ಸ್ವತಃ ಹೀಥ್ ಸ್ಟ್ರೀಕ್ ಅವರ ಪತ್ನಿ ನ್ಯಾದಿನೆ ಭಾನುವಾರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಖಚಿತಪಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಹೀಥ್ ಸ್ಟ್ರೀಕ್ ನಿಧನರಾಗಿದ್ದಾರೆ ಎನ್ನುವ ಗಾಳಿ ಸುದ್ದಿ ಸಾಕಷ್ಟು ವೈರಲ್ ಆಗಿತ್ತು. ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಹೆನ್ರಿ ಓಲಂಗಾ ಅವರ ಟ್ವೀಟ್ ಬೆನ್ನಲ್ಲೇ ಬಹುತೇಕ ಮಂದಿ ಹೀಥ್ ಸ್ಟ್ರೀಕ್ ನಿಧನವಾಗಿದ್ದಾರೆಂದು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದರು. 

ಆದರೆ ತಾವಿನ್ನು ಸಾವನ್ನಪ್ಪಿಲ್ಲ ಎಂದು ಸ್ವತಃ ಹೀಥ್ ಸ್ಟ್ರೀಕ್‌ ಖಚಿತಪಡಿಸುವ ಮೂಲಕ ಈ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದರು. ಹೆನ್ರಿ ಒಲಂಗಾ ಆಗಸ್ಟ್ 23ರಂದು, ಇಂದು ಬೆಳಗ್ಗೆ ದುಃಖದ ವಿಚಾರವೇನೆಂದರೆ ನಮ್ಮ ಹೀಥ್ ಸ್ಟ್ರೀಕ್‌, ಮತ್ತೊಂದು ತುದಿಯನ್ನು ಕ್ರಾಸ್‌ ಮಾಡಿದ್ದಾರೆ" ಎಂದು ಸೂಚ್ಯವಾಗಿ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಆ ಸುದ್ದಿ ಹೀಥ್ ಸ್ಟ್ರೀಕ್ ಗಮನಕ್ಕೂ ಬಂದಿದೆ. ಸ್ವತಃ ಈ ಕುರಿತಂತೆ ಹೀಥ್ ಸ್ಟ್ರೀಕ್‌, ಒಲಂಗಾ ಅವರಿಗೆ ಮೆಸೇಜ್ ಮಾಡಿ ನಾನಿನ್ನೂ ಜೀವಂತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಹೀಗಾಗಿ ಹೆನ್ರಿ ಒಲಂಗಾ, ಈ ಕುರಿತಂತೆ ಸ್ಪಷ್ಟನೆ ನೀಡಿದ್ದು ಅವರಿನ್ನೂ ಬದುಕಿದ್ದಾರೆ ಎಂದು ತಿಳಿಸಿದ್ದರು.

ಒಲಂಗಾ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ, ಸ್ವತಃ ಹೀಥ್ ಸ್ಟ್ರೀಕ್‌, ನಾನಿನ್ನು ಜೀವಂತವಾಗಿದ್ದೇನೆ. ಈ ರನೌಟ್ ವಿಚಾರವನ್ನು ದಯವಿಟ್ಟು ಆದಷ್ಟು ಬೇಗ ವಾಪಾಸ್ ತೆಗೆದುಕೊ ಬಡ್ಡಿ ಎಂದು ವಾಟ್ಸ್‌ಅಪ್‌ನಲ್ಲಿ ಟೆಕ್ಸ್ಟ್ ಮೆಸೇಜ್ ಮಾಡಿ ತಾವಿನ್ನು ರನೌಟ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದೀಗ ಹೀಥ್ ಸ್ಟ್ರೀಕ್ ಪತ್ನಿ ನ್ಯಾದಿನಿ ಸ್ಟ್ರೀಕ್, "ಸೆಪ್ಟೆಂಬರ್ 03, 2033ರ ಇಂದು ಮುಂಜಾನೆ ನನ್ನ ಜೀವನದ ಅತ್ಯಂತ ಪ್ರೀತಿಪಾತ್ರವಾದ ವ್ಯಕ್ತಿ ಹಾಗೂ ನನ್ನ ಮಕ್ಕಳ ಮುದ್ದಿನ ತಂದೆಯನ್ನು ಕಳೆದುಕೊಂಡಿದ್ದೇನೆ. ತಮ್ಮ ಕೊನೆಯ ಕ್ಷಣವನ್ನು ತಾವು ವಾಸವಾಗಿದ್ದ ಮನೆಯಲ್ಲಿ ತಮ್ಮ ಕುಟುಂಬ ಹಾಗೂ ಪ್ರೀತಿಪಾತ್ರರ ಜತೆ ಕಳೆಯಲು ಬಯಸಿದ್ದರಿಂದ ಅವರನ್ನು ಮನೆಗೆ ಕರೆದುಕೊಂಡು ಬರಲಾಗಿತ್ತು. ಅವರು ಎಂದಿಗೂ ಒಬ್ಬಂಟಿಯಾಗಿ ಪಾರ್ಕ್‌ನಲ್ಲಿ ವಾಕ್ ಮಾಡಿದವರಲ್ಲ. ನಾವು ನಿಮ್ಮನ್ನು ಕೂಡಿಕೊಳ್ಳಲಿದ್ದೇವೆ. ನಾವು ಮತ್ತೊಮ್ಮೆ ನಿಮ್ಮ ಕೈ ಹಿಡಿಯುತ್ತೇನೆ" ಎಂದು ನುಡಿನಮನ ಸಲ್ಲಿಸಿದ್ದಾರೆ.

ಹೀಥ್ ಸ್ಟ್ರೀಕ್‌, ಜಿಂಬಾಬ್ವೆ ಕ್ರಿಕೆಟ್ ಕಂಡ ದಿಗ್ಗಜ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಇನ್ನು 2000ದಿಂದ 2004ರ ವರೆಗೆ ನಾಯಕನಾಗಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಜಿಂಬಾಬ್ವೆ ಪರ 12 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 65 ಟೆಸ್ಟ್ ಹಾಗೂ 189 ಏಕದಿನ ಪಂದ್ಯಗಳನ್ನಾಡಿದ್ದರು. ಹಲವಾರು ಬಾರಿ ಏಕಾಂಗಿಯಾಗಿ ಜಿಂಬಾಬ್ವೆ ತಂಡವನ್ನು ಗೆಲುವಿನ ದಡ ಸೇರಿಸಿದ ಹೆಗ್ಗಳಿಕೆ ಹೀಥ್ ಸ್ಟ್ರೀಕ್‌ ಅವರಿಗಿದೆ. ಇಂದಿಗೂ 100+ ಟೆಸ್ಟ್ ವಿಕೆಟ್ ಕಬಳಿಸಿದ ಜಿಂಬಾಬ್ವೆ ತಂಡದ ಮೊದಲ ಹಾಗೂ ಏಕೈಕ ಬೌಲರ್ ಎನ್ನುವ ಕೀರ್ತಿ ಹೀಥ್ ಸ್ಟ್ರೀಕ್ ಅವರಿಗಿದೆ. ಹೀಥ್ ಸ್ಟ್ರೀಕ್‌ 1993ರಲ್ಲಿ ಪಾಕಿಸ್ತಾನ ವಿರುದ್ದ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ರಾವಲ್ಪಿಂಡಿಯಲ್ಲಿ ತಾವಾಡಿದ ಎರಡನೇ ಟೆಸ್ಟ್ ಪಂದ್ಯದಲ್ಲೇ 8 ವಿಕೆಟ್ ಕಬಳಿಸುವ ಮೂಲಕ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.

ಹೀಥ್ ಸ್ಟ್ರೀಕ್ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.

Scroll to load tweet…
Scroll to load tweet…