ದುಬೈ(ಆ.26): ಕೇಂದ್ರಾಡಳಿತ ಪ್ರದೇಶವಾದ ಜಮ್ಮು&ಕಾಶ್ಮೀರದಲ್ಲಿ ಕ್ರಿಕೆಟ್‌ನ್ನು ಹೆಚ್ಚೆಚ್ಚು ಪ್ರಚಾರ ಮಾಡುವ ಮೂಲಕ ಅಲ್ಲಿ ಕ್ರಿಕೆಟ್‌ ಬಗ್ಗೆ ಆಸಕ್ತಿ ಇರುವ ಪ್ರತಿಭಾನ್ವಿತ ಯುವಕರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ. 

ಕ್ರೀಡೆ ಯುವಕರಿಗೆ ಕೇವಲ ವೃತ್ತಿ ಬದುಕನ್ನು ರೋಪಿಸುವುದಿಲ್ಲ ಬದಲಾಗಿ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಹೀಗಾಗಿ ಈ ಬಗ್ಗೆ ಗಮನ ಹರಿಸಬೇಕೆಂದು ಜಮ್ಮು&ಕಾಶ್ಮೀರದ ಡಿಜಿಪಿ ದಿಲ್ಬಾಗ್‌ ಸಿಂಗ್ ಅವರಿಗೆ ಸುರೇಶ್ ರೈನಾ ಪತ್ರ ಬರೆದಿದ್ದಾರೆ. ನಾನು ತುಂಬಾ ನಿರೀಕ್ಷೆ ಹಾಗೂ ಭರವಸೆಗಳನ್ನಿಟ್ಟುಕೊಂಡು ಈ ಪತ್ರವನ್ನು ಬರೆಯುತ್ತಿದ್ದೇನೆ. ಜಮ್ಮು & ಕಾಶ್ಮೀರದಲ್ಲಿ ಕ್ರಿಕೆಟ್‌ನ್ನು ಹೆಚ್ಚು ಉತ್ತೇಜಿಸುವ ಮೂಲಕ ಅವಕಾಶವಂಚಿತ ಮಕ್ಕಳಿಗೆ ನೆರವಾಗಿ ಎಂದು ರೈನಾ ಮನವಿ ಮಾಡಿಕೊಂಡಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿರುವ ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಮಾನಸಿಕ ಸ್ಥೈರ್ಯ, ದೈಹಿಕ ಫಿಟ್ನೆಸ್ ಹಾಗೂ ಕೌಶಲ್ಯ ತರಬೇತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡಬಹುದುದಾಗಿದೆ ಎಂದು ರೈನಾ ಹೇಳಿದ್ದಾರೆ. ಮುಂದುವರೆದು, ಯಾವುದೇ ಕ್ರೀಡೆಯಾಗಿರಲಿ ಮಕ್ಕಳಲ್ಲಿ ಶಿಸ್ತು ಹಾಗೂ ದೈಹಿಕ ಫಿಟ್ನೆಸ್‌ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದ್ದಾರೆ.

ಸುರೇಶ್ ರೈನಾ ಟೀಂ ಪ್ಲೇಯರ್ ಎಂದು ಗುಣಗಾನ ಮಾಡಿದ ರಾಹುಲ್ ದ್ರಾವಿಡ್

ಕ್ರಿಕೆಟ್ ಬರೀ ಒಂದು ಕ್ರೀಡೆಯಲ್ಲ, ಒಂದು ಒಂದು ಗುಂಪನ್ನು ಒಳಗೊಂಡು ಎಲ್ಲರ ಮೇಲೂ ಪ್ರಭಾವ ಬೀರುತ್ತದೆ. ಇದು ವ್ಯಕ್ತಿಯೊಬ್ಬನ ಶಿಸ್ತು ಹಾಗೂ ವೃತ್ತಿಪರತೆಯಿಂದಿರಲು ಪ್ರೇರೇಪಿಸುತ್ತದೆ. ಇದನ್ನೇ ಮುಂದೆ ಅವರೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಇದು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿರಲು ನೆರವಾಗುತ್ತದೆ ಎಂದು ಪತ್ರದಲ್ಲಿ ರೈನಾ ಉಲ್ಲೇಖಿಸಿದ್ದಾರೆ.

ಇಲ್ಲಿಯವರೆಗೆ ಪರ್ವೇಜ್ ರಸೂಲ್ ಮಾತ್ರ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಆಫ್‌ ಸ್ಪಿನ್ನರ್ ರಸೂಲ್ ಭಾರತ ಪರ ಒಂದು ಏಕದಿನ ಹಾಗೂ ಟಿ20 ಪಂದ್ಯವನ್ನಾಡಿದ್ದಾರೆ. ಆದರೆ ತಂಡದಲ್ಲಿ ರಸೂಲ್‌ಗೆ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿಲ್ಲ.