ಚೆನ್ನೈ(ಜೂ.26): ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಪರಿಣಾಮ ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್ರೌಂಡರ್‌ ರಾಬಿನ್‌ ಸಿಂಗ್‌ ಕಾರನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದಿದ್ದು, 500 ರುಪಾಯಿ ದಂಡ ವಿಧಿಸಿದ್ದಾರೆ. 

ಜೂ.19ರಿಂದ 12 ದಿನಗಳ ಕಾಲ ಚೆನ್ನೈನಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಣೆಯಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳಿಗಾಗಿ 2 ಕಿ.ಮೀ. ಪ್ರಯಾಣಿಸಬಹುದಾಗಿದೆ. ಇದಕ್ಕೂ ಮಾನ್ಯತೆ ಪಡೆದ ಇ-ಪಾಸ್‌ ಹೊಂದಿರಬೇಕು. ಆದರೆ ರಾಬಿನ್‌ ಸಿಂಗ್‌ ಯಾವುದೇ ಪಾಸ್‌ ಹೊಂದಿಲ್ಲ. ಅಲ್ಲದೇ ಅವರು 2 ಕಿ.ಮೀ. ಗಿಂತಲೂ ಹೆಚ್ಚು ದೂರ ತಮ್ಮ ಕಾರನ್ನು ಚಲಾಯಿಸಿದ್ದಾರೆ. ಇದು ನಿಯಮ ಬಾಹಿರವಾಗಿದೆ. 56 ವರ್ಷದ ತಮಿಳುನಾಡು ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಈಸ್ಟ್‌ ಕೋಸ್ಟ್‌ ರಸ್ತೆ (ಇಸಿಆರ್‌)ಯಿಂದ ಬರುತ್ತಿದ್ದ ವೇಳೆ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

'ಜೆಂಡರ್‌ ಸ್ವ್ಯಾಪ್‌ನಲ್ಲಿ ಹೆಣ್ಣಾದ ಧೋನಿ, ರೈನಾ..!

ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ರಾಬಿನ್ ಸಿಂಗ್ ಕೂಡಾ ಒಬ್ಬರಾಗಿದ್ದಾರೆ. 1990ರ ದಶಕದಲ್ಲಿ ಭಾರತ ಕ್ರಿಕೆಟ್ ತಂಡದ ಅವಿಭಾಜ್ಯವಾಗಿದ್ದ ರಾಬಿನ್ ಸಿಂಗ್, ಟೀಂ ಇಂಡಿಯಾ ಪರ 136 ಏಕದಿನ ಪಂದ್ಯಗಳನ್ನಾಡಿದ್ದರು. ಇನ್ನು 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ರಾಬಿನ್ ಸಿಂಗ್ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಇನ್ನು ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿಯೂ ರಾಬಿನ್ ಸಿಂಗ್ ಕಾರ್ಯನಿರ್ವಹಿಸಿದ್ದಾರೆ.