ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ರಾಜಕೀಯದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದು, ಆಡಳಿಯರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕೋಲ್ಕತ(ಫೆ.24): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೇಸಿ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಹೌದು, 2019ರಲ್ಲಿ ನಾನಿನ್ನು ಮುಂದಿನ 10 ವರ್ಷಗಳ ಕಾಲ ಕ್ರಿಕೆಟ್ ಆಡಲು ಸಿದ್ದನಿದ್ದೇನೆ, ಆದರೆ ಇಲ್ಲಿಗೆ ಸಾಕು ಎಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಮನೋಜ್ ತಿವಾರಿ ವಿದಾಯ ಹೇಳಿದ್ದರು. ಇದಾಗಿ ಎರಡು ವರ್ಷಗಳ ಬಳಿಕ ಮನೀಜ್ ತಿವಾರಿ ಇದೀಗ ಹೊಸ ಇನಿಂಗ್ಸ್ ಆರಂಭಿಸಿದ್ದು, 35 ವರ್ಷದ ತಿವಾರಿ ರಾಜಕೀಯ ಸೇರ್ಪಡೆಯ ವಿಚಾರವನ್ನು ಖಚಿತಪಡಿಸಿದ್ದಾರೆ. ಪಶ್ಚಿಮ ಬಂಗಾಳ ಮನೋಜ್ ತಿವಾರಿಯ ತವರಾಗಿದ್ದು, ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ರಂಗದಲ್ಲಿ ತಮ್ಮ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.
ತಮ್ಮ ರಾಜಕೀಯ ಸೇರ್ಪಡೆಯ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದು, ಇಂದಿನಿಂದ ಹೊಸ ಪ್ರಯಾಣ ಆರಂಭವಾಗಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಬೆಂಬಲ ನನ್ನ ಮೇಲಿರಲಿ. ಇದು ನನ್ನ ರಾಜಕೀಯ ಫ್ರೋಫೈಲ್ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಲಿಂಕನ್ನು ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮನೋಜ್ ತಿವಾರಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ.
ಮನೋಜ್ ತಿವಾರಿ ಭಾರತ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿ 302 ರನ್ ಬಾರಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 125 ಪಂದ್ಯಗಳನ್ನಾಡಿ 27 ಶತಕ ಹಾಗೂ 37 ಅರ್ಧಶತಕ ಸಹಿತ 9 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ.
ಮನೋಜ್ ತಿವಾರಿ ಸುಶ್ಮಿತಾ ರಾಯ್: ಕ್ರಿಕೆಟ್‌ನ ಮತ್ತೊಂದು ಗ್ಲಾಮರಸ್ ಕಪಲ್!
ರಾಜಕೀಯಕ್ಕೆ ಕ್ರಿಕೆಟಿಗರ ಸೇರ್ಪಡೆ ಹೊಸತೇನಲ್ಲ:
ಪ್ರಮುಖ ಕ್ರಿಕೆಟಿಗರು ರಾಜಕೀಯ ಸೇರುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿ ಪಕ್ಷ ಸೇರಿ ಲೋಕಸಭಾ ಚುನಾವಣೆಯಲ್ಲಿ ಪೂರ್ವ ಡೆಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಮೊಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿಧು, ಕೀರ್ತಿ ಆಜಾದ್ ಹಾಗೂ ಮನ್ಸೂರ್ ಅಲಿ ಖಾನ್ ಪಟೌಡಿ ಅವರಂತಹ ಆಟಗಾರರು ರಾಜಕೀಯ ಪ್ರವೇಶಿಸಿ ಗಮನ ಸೆಳೆದಿದ್ದಾರೆ.
