ವಿದೇಶಿ ಟಿ20 ಲೀಗ್ ಮೂಲಕ ಕ್ರಿಕೆಟ್‌ಗೆ ಮರಳಲು ಸಜ್ಜಾದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ..!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿದೇಶಿ ಟೂರ್ನಿಯೊಂದರಲ್ಲಿ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು ಫುಟ್ಬಾಲ್ ಲೋಕದ ದಂತಕಥೆ ಲಿಯೋನೆಲ್ ಮೆಸ್ಸಿಗೆ ಇಟಲಿಯನ್ ಲೀಗ್ ಭರ್ಜರಿ ಆಫರ್ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಆ.02): ಭಾರತದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್, ಇದೇ ತಿಂಗಳು 28ರಿಂದ ಆರಂಭಗೊಳ್ಳಲಿರುವ ಉದ್ಘಾಟನಾ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡಲು 70 ವಿದೇಶಿ ಆಟಗಾರರು ಆಸಕ್ತಿ ತೋರಿದ್ದು, ಇದರಲ್ಲಿ ಪಠಾಣ್ ಸೇರಿದಂತೆ ಕೆಲ ಭಾರತೀಯ ಆಟಗಾರರೂ ಇದ್ದಾರೆ ಎನ್ನಲಾಗದೆ. ಇದೇ ವರ್ಷ ಜನವರಿಯಲ್ಲಿ ಪಠಾಣ್ ಅಂತಾರಾಷ್ಟ್ರೀಯ, ದೇಸಿ ಕ್ರಿಕೆಟ್ ಹಾಗೂ ಐಪಿಎಲ್ನಿಂದ ನಿವೃತ್ತಿ ಪಡೆದಿದ್ದರು. ಭಾರತೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಆಟಗಾರರಿಗೆ, ವಿದೇಶಿ ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಲಿದೆ.
ಐಪಿಎಲ್ 2020: ಫ್ರಾಂಚೈಸಿಗಳ ಮುಂದೆ ಎದುರಾಗಿವೆ ಹಲವು ಸವಾಲು..!
ಇಟಲಿ ಕ್ಲಬ್‌ನಿಂದ ಮೆಸ್ಸಿಗೆ 2300 ಕೋಟಿ ಆಫರ್?
ಮಿಲಾನ್: ಅರ್ಜೆಂಟೀನಾ ಹಾಗೂ ಬಾರ್ಸಿಲೋನಾದ ತಾರಾ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ, ಸದ್ಯದಲ್ಲೇ ಸ್ಪ್ಯಾನಿಶ್ ಲೀಗ್ ತೊರೆದು ಇಟಲಿಯನ್ ಲೀಗ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಇಟಲಿಯ ಇಂಟರ್ ಮಿಲಾನ್ ಫುಟ್ಬಾಲ್ ಕ್ಲಬ್, ಮೆಸ್ಸಿಗೆ 4 ವರ್ಷದ ಅವಧಿಗೆ ಬರೋಬ್ಬರಿ 2300 ಕೋಟಿ ರುಪಾಯಿ (235 ಮಿಲಿಯನ್ ಪೌಂಡ್) ಒಪ್ಪಂದದ ಪ್ರಸ್ತಾಪವಿರಿಸಿದೆ ಎಂದು ಬ್ರಿಟನ್‌ನ ಪ್ರತಿಷ್ಠಿತ ಪತ್ರಿಕೆ ‘ದಿ ಸನ್’ ವರದಿ ಮಾಡಿದೆ. ಅಂದರೆ ಮೆಸ್ಸಿ ವರ್ಷಕ್ಕೆ 500 ಕೋಟಿ ರುಪಾಯಿ (60 ಮಿಲಿಯನ್ ಪೌಂಡ್)ಗೂ ಹೆಚ್ಚು ಸಂಪಾದಿಸಲಿದ್ದಾರೆ. ಇದರೊಂದಿಗೆ ಲೀಗ್‌ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯಲಿರುವ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಯುವೆಂಟುಸ್ ತಂಡ, ಕ್ರಿಸ್ಟಿಯಾನೋ ರೊನಾಲ್ಡೋಗೆ ವಾರ್ಷಿಕ 267 ಕೋಟಿ ರು. (27.3 ಮಿಲಿಯನ್ ಪೌಂಡ್) ಸಂಭಾವನೆ ನೀಡುತ್ತಿದೆ.