ನವದೆಹಲಿ(ಡಿ.25): ಕೆಲ ದಿನಗಳ ಹಿಂದಷ್ಟೇ ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆ(ಡಿಡಿಸಿಎ)ಯಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತ ಹಾಗೂ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅರುಣ್‌ ಜೇಟ್ಲಿ ಪ್ರತಿಮೆ ಸ್ಥಾಪನೆ ಬಗ್ಗೆ ಕಿಡಿಕಾರಿದ್ದ ಮಾಜಿ ಕ್ರಿಕೆಟಿಗ ಬಿಷನ್‌ ಸಿಂಗ್ ಬೇಡಿ, ಇದೀಗ ಡಿಡಿಸಿಎ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಕಳೆದ 5 ವರ್ಷಗಳ ಅವಧಿಯಲ್ಲಿ ಡಿಡಿಸಿಎ ಬರೋಬ್ಬರಿ 15 ಕೋಟಿ ರುಪಾಯಿಗಳನ್ನು ಅನಗತ್ಯವಾಗಿ ಕೋರ್ಟು-ಕಚೇರಿಯ ವ್ಯಾಜ್ಯಕ್ಕೆ ದುರ್ಬಳಕೆ ಮಾಡಿಕೊಂಡಿದೆ ಎಂದು ಗಂಭೀರ ಆರೋಪವನ್ನು ಮಾಜಿ ಸ್ಪಿನ್ನರ್ ಬೇಡಿ ಮಾಡಿದ್ದಾರೆ.

ಈ ಕುರಿತಂತೆ ಟ್ವೀಟ್‌ ಮಾಡಿರುವ ಬಿಷನ್ ಸಿಂಗ್ ಬೇಡಿ, ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಪಾಲಿಗಿದು ಖಚಿತವಾದ ಸುದ್ದಿ, ಕಳೆದ 5 ವರ್ಷಗಳ ಅವಧಿಯಲ್ಲಿ ಡಿಡಿಸಿಎ ಕಾನೂನು ವ್ಯಾಜ್ಯಗಳಿಗಾಗಿಯೇ ಬರೋಬ್ಬರಿ 15 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಖರ್ಚು ಮಾಡಿರುವುದು ಹೊರಗಿನವರಿಗಾಗಿ ಅಲ್ಲ, ಬದಲಾಗಿ ಒಳಗಿರುವ ಗುಂಪೇ ಈ ಕೆಲಸ ಮಾಡಿದೆ. ಒಬ್ಬರು ಮತ್ತೊಬ್ಬರ ಮೇಲೆ ಪ್ರಕರಣ ದಾಖಲಿಸಿ ವೈಯುಕ್ತಿಕ ಲಾಭ ಮಾಡಿಕೊಂಡಿದ್ದಾರೆ. ಈ ಮೂಲಕ ಡಿಡಿಸಿಎಯನ್ನು ಸಂಪೂರ್ಣವಾಗಿ ಮುಗಿಸಿ ಶವಪೆಟ್ಟಿಗೆಯೊಳಗೆ ತುಂಬಿದ್ದಾರೆ. ಕ್ರಿಕೆಟಿಗರ ಅಥವಾ ಕ್ರಿಕೆಟ್‌ ಅಭಿವೃದ್ದಿಗೆ ಡಿಡಿಸಿಎ 15 ಕೋಟಿ ರುಪಾಯಿ ಬಳಸಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬೇಡಿ ಟ್ವೀಟ್‌ ಮಾಡಿದ್ದಾರೆ.

ಕೋಟ್ಲಾದಲ್ಲಿ ಜೇಟ್ಲಿ ಪ್ರತಿಮೆ; DDCA ವಿರುದ್ಧ ಕಿಡಿಕಾರಿದ ಬಿಷನ್ ಸಿಂಗ್ ಬೇಡಿ

ಬಿಷನ್‌ ಸಿಂಗ್ ಬೇಡಿ ಅವರ ಈ ಟ್ವೀಟ್‌ಗೆ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಸಹ ದನಿಗೂಡಿಸಿದ್ದಾರೆ. ಬೇಡಿಯವರೇ ನಿಮ್ಮ ಮಾತು ಸತ್ಯ. ಕಳೆದ 10 ವರ್ಷಗಳಿಂದ ಸಹಾಯಕ ಸಿಬ್ಬಂದಿಗೆ ಸರಿಯಾಗಿ ಹಣ ಪಾವತಿಸಿಲ್ಲ. ಈ ಹಣಕಾಸು ವರ್ಷದಲ್ಲೇ ಕ್ರಿಕೆಟ್‌ ಅಭಿವೃದ್ದಿಗೆ ಡಿಡಿಸಿಎ ಒಂದೇ ಒಂದು ರುಪಾಯಿ ಖರ್ಚು ಮಾಡಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.