ರಾಂಚಿ(ಏ.22): ಕಳೆದ ವರ್ಷ ಏಕದಿನ ವಿಶ್ವಕಪ್‌ ಬಳಿಕ ಕ್ರಿಕೆಟ್‌ನಿಂದ ಬಿಡುವು ಪಡೆದಿರುವ ಭಾರತದ ಮಾಜಿ ನಾಯಕ ಎಂ.ಎಸ್‌.ಧೋನಿಗೆ ಲಾಕ್‌ಡೌನ್‌ನಿಂದಾಗಿ ಮತ್ತಷ್ಟು ಬಿಡುವು ಸಿಕ್ಕಿದೆ. 

ಕುಟುಂಬದೊಂದಿಗೆ ಇಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ವಾಸಿಸುತ್ತಿರುವ ಧೋನಿ, ಮಗಳು ಝಿವಾ ಜತೆ ಮನೆಯ ಆವರಣದಲ್ಲೇ ಬೈಕ್‌ ರೈಡ್‌ ಮಾಡಿರುವು ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಎಲ್ಲವೂ ಸರಿಯಾಗಿದ್ದರೆ ಧೋನಿ ಇಷ್ಟರೊಳಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

ಧೋನಿ ಗಮನಸೆಳೆಯಲು ಪತ್ನಿ ಸಾಕ್ಷಿ ಐಡಿಯಾ, ಹೇಗೆ ಕಳೆಯುತ್ತಿದ್ದಾರೆ ಲಾಕ್‌ಡೌನ್ ಸಮಯ?

ಏಕದಿನ ವಿಶ್ವಕಪ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಧೋನಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವುದು ಅನುಮಾನ ಎನಿಸಿದೆ. ಐಪಿಎಲ್‌ನಲ್ಲಿ ಧೋನಿ ಪ್ರದರ್ಶನ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಕಮ್‌ಬ್ಯಾಕ್ ನಿರ್ಧರಿಸಲಿದೆ ಎಂದು ಕೋಚ್ ರವಿಶಾಸ್ತ್ರಿ ಕೆಲ ತಿಂಗಳ ಹಿಂದಷ್ಟೇ ಹೇಳಿದ್ದರು. ಆದರೆ ಐಪಿಎಲ್ ಟೂರ್ನಿ ಆಯೋಜನೆ ಅನುಮಾನ ಎನಿಸಿದ್ದರಿಂದ ಧೋನಿ ಕ್ರಿಕೆಟ್ ಬದುಕು ಅತಂತ್ರವೆನಿಸಿದೆ.