ಕೇಪ್‌ಟೌನ್(ಅ.09): ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ವೆರ್ನಾನ್ ಫಿಲಾಂಡರ್ ಅವರ ಕಿರಿಯ ಸಹೋದರನನ್ನು ಇಲ್ಲಿನ ರಾವೆನ್‌ಸ್ಮೀಡ್‌ನಲ್ಲಿ ಬುಧವಾರ ಮಧ್ಯಾಹ್ನ ಅವರ ಮನೆಯಿಂದ ಕೆಲವೇ ಅಂತರದಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಸ್ಥಳೀಯ ಮಾಧ್ಯಮಗಳು ಈ ಘಟನೆಯನ್ನು ಖಚಿತಪಡಿಸಿವೆ. ವೆರ್ನಾನ್ ಸಹೋದರ ಟೈರೋನ್ ಫಿಲಾಂಡರ್ ಪಕ್ಕದ ಮನೆಯವರಿಗೆ ಟ್ರಾಲಿಯಲ್ಲಿ ನೀರನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಆತನ ಮೇಲೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. 

ಇದೊಂದು ಭಯಾನಕ ಹತ್ಯೆಯಾಗಿದ್ದು, ಈ ಘಟನೆಯ ಬಗ್ಗೆ ಸದ್ಯಕ್ಕೆ ಸರಿಯಾದ ಮಾಹಿತಿಯಿಲ್ಲ. ಹತ್ಯೆಗೆ ಏನು ಕಾರಣ ಎನ್ನುವುದನ್ನು ಗೊತ್ತಿಲ್ಲ ಎಂದು ವೆರ್ನಾನ್ ಫಿಲಾಂಡರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

ಆಫ್ರಿಕನ್ ನ್ಯೂಸ್ ಏಜೆನ್ಸಿ ವರದಿಗಾರರ ಪ್ರಕಾರ ಘಟನೆ ನಡೆದಾಗ ಅವನ ತಾಯಿ ಬೊನಿತಾ ಹಾಗೂ ಕುಟುಂಬದ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಪಶ್ಚಿಮ ಕೇಪ್‌ಟೌನ್ ಪೊಲೀಸರು ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

35 ವರ್ಷದ ವೆರ್ನಾನ್ ಫಿಲಾಂಡರ್ ಈ ವರ್ಷದಾರಂಭದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಫಿಲಾಂಡರ್ ದಕ್ಷಿಣ ಆಫ್ರಿಕಾ ಪರ 64 ಟೆಸ್ಟ್ ಹಾಗೂ 101 ಏಕದಿನ ಪಂದ್ಯಗಳನ್ನಾಡಿದ್ಧಾರೆ. ಫಿಲಾಂಡರ್ ಈ ವರ್ಷ ಕೌಂಟಿ ಕ್ರಿಕೆಟ್‌ನಲ್ಲಿ ಸೋಮರ್‌ಸೆಟ್ ತಂಡವನ್ನು ಪ್ರತಿನಿಧಿಸಬೇಕಿತ್ತು. ಆದರೆ ಕೊರೋನಾ ಭೀತಿಯಿಂದಾಗಿ ಈ ಒಪ್ಪಂದ ರದ್ದು ಮಾಡಲಾಗಿದೆ.