ನವದೆಹಲಿ(ಮೇ.05): ಭಾರತ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಆಗುವ ಆಸೆ ಇದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್‌ ಅಖ್ತರ್‌ ಹೇಳಿದ್ದಾರೆ. 

ಆನ್‌ಲೈನ್‌ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್‌, ‘ನಾನು ಕಲಿತಿರುವುದನ್ನು ಮತ್ತೊಬ್ಬರಿಗೆ ಹೇಳಿಕೊಡಬೇಕು. ಭಾರತದ ಕೋಚ್‌ ಆಗುವ ಅವಕಾಶ ಸಿಕ್ಕರೆ, ಹೆಚ್ಚು ವೇಗ, ಆಕ್ರಮಣಕಾರಿ ಬೌಲರ್‌ಗಳನ್ನು ತಯಾರು ಮಾಡುತ್ತೇನೆ. ಭಾರತೀಯರಿಗೆ ನನ್ನ ಮೇಲೆ ಅಭಿಮಾನವಿದೆ’ ಎಂದು ಹೇಳಿದ್ದಾರೆ. 

ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಅವರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಪಡೆಯನ್ನು ಟೀಂ ಇಂಡಿಯಾ ಹೊಂದಿದೆ. ವಿಶ್ವದ ಯಾವುದೇ ಮೈದಾನದಲ್ಲಿ ಬೇಕಾದರೂ ಎದುರಾಳಿ ತಂಡವನ್ನು ಆಲೌಟ್ ಮಾಡುವ ಸಾಮರ್ಥ್ಯ ಈ ಬೌಲರ್‌ಗಳಲ್ಲಿದೆ. 

ಇಂಗ್ಲೆಂಡ್‌ನ 100 ಬಾಲ್‌ ಟೂರ್ನಿ ಮುಂದೂಡಿಕೆ

ಇದೇ ವೇಳೆ ಐಪಿಎಲ್‌ನ ಕೋಲ್ಕತಾ ನೈಟ್‌ ರೈಡರ್ಸ್ ತಂಡದೊಂದಿಗೂ ಕೆಲಸ ಮಾಡುವ ಆಸೆ ಇದೆ ಎಂದು ಅಖ್ತರ್‌ ಹೇಳಿಕೊಂಡಿದ್ದಾರೆ. ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಅಖ್ತರ್ ಕೆಕೆಆರ್ ತಂಡದ ಪರ ಕಣಕ್ಕಿಳಿದಿದ್ದರು.

ಶೋಯೆಬ್ ಅಖ್ತರ್ ಪಾಕಿಸ್ತಾನ ಪರ 163 ಏಕದಿನ ಪಂದ್ಯಗಳನ್ನಾಡಿ 247 ವಿಕೆಟ್ ಕಬಳಿಸಿದ್ದಾರೆ. ಇನ್ನು 46 ಟೆಸ್ಟ್ ಪಂದ್ಯಗಳನ್ನಾಡಿ 178 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ನಿಗಟ್ಟಿದ್ದಾರೆ. ಮಾರಕ ಬೌನ್ಸರ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸುವಲ್ಲಿ ಅಖ್ತರ್ ಯಶಸ್ವಿಯಾಗಿದ್ದಾರೆ.

ಸದ್ಯ ಭರತ್ ಅರುಣ್ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭರತ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟೆಸ್ಟ್, ಏಕದಿನ ಹಾಗೂ ಟಿ20 ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ.