ಲಂಡನ್(ಮೇ.06)‌: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ)ಯ ಬಹು ನಿರೀಕ್ಷಿತ 100 ಬಾಲ್‌ಗಳ ಟೂರ್ನಿ ‘ದ ಹಂಡ್ರೆಡ್‌’ 2021ಕ್ಕೆ ಮುಂದೂಡಲ್ಪಟ್ಟಿದೆ. 

ಈ ವರ್ಷ ಜುಲೈ 17ರಿಂದ ಆಗಸ್ಟ್‌ 15ರ ವರೆಗೂ ಟೂರ್ನಿ ನಡೆಯಬೇಕಿತ್ತು. ಪುರುಷ ಹಾಗೂ ಮಹಿಳಾ ಫ್ರಾಂಚೈಸಿಗಳು ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದವು. ಇದೀಗ ಆಟಗಾರರ ಗುತ್ತಿಗೆಯನ್ನು ತಂಡಗಳು ರದ್ದುಗೊಳಿಸಿವೆ. ಮುಂದಿನ ವರ್ಷ ತಂಡಗಳು ಹೊಸದಾಗಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕೆ ಇಲ್ಲವೇ ಈಗ ಆಯ್ಕೆ ಮಾಡಿಕೊಂಡಿರುವ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗಲಿದೆಯೇ ಎನ್ನುವ ಬಗ್ಗೆ ಕುತೂಹಲವಿದೆ.

100 ಬಾಲ್‌ ಕ್ರಿಕೆಟ್‌: ಓವರ್’ಗೆ 10 ಎಸೆತ..!

ಕಳೆದ ಅಕ್ಟೋಬರ್‌ನಲ್ಲಿಯೇ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದ್ದವು. ಇನ್ನು ಮಹಿಳಾ ಕ್ರಿಕೆಟ್ ತಂಡ ಖರೀದಿಯ ಸಿದ್ದತೆಗಳು ಆರಂಭವಾಗಿದ್ದವು. ಹೀಗಿರುವಾಗಲೇ ಕೊರೋನಾ ವೈರಸ್ ದಾಂಗುಡಿಯಿಟ್ಟಿದ್ದರಿಂದ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗಿವೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ 2021ಕ್ಕೆ ಮುಂದೂಡಲ್ಪಟ್ಟಿದೆ. ಇನ್ನು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್  ಟೂರ್ನಿಯು ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟದೆ.
ಕೊರೋನಾ ವೈರಸ್ ಭಾರತ, ಜಪಾನ್ ಮಾತ್ರವಲ್ಲದೇ ಇಂಗ್ಲೆಂಡ್ ಮೇಲೂ ಬಹುದೊಡ್ಡ ಹೊಡೆತವನ್ನು ನೀಡಿದೆ. ಇಂಗ್ಲೆಂಡ್‌ನಲ್ಲಿ ಏಪ್ರಿಲ್‌ನಿಂದ ಜುಲೈ 01ರ ವರೆಗೆ ನಡೆಯಬೇಕಿದ್ದ ದೇಸಿ ಕ್ರಿಕೆಟ್ ಟೂರ್ನಿಗಳನ್ನು ಇಸಿಬಿ ಈಗಾಗಲೇ ರದ್ದುಪಡಿಸಿದೆ. ಇನ್ನು ಖಾಲಿ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸುವ ಬಗ್ಗೆ ಇಸಿಬಿ ಲೆಕ್ಕಾಚಾರ ಹಾಕುತ್ತಿದೆ.