ದೇಶಿಯ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಟೀಂ ಇಂಡಿಯಾ ಆಲ್ರೌಂಡರ್!

ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ರಿಷಿ ಧವನ್ ದೇಶಿಯ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಹಿಮಾಚಲ ಪ್ರದೇಶ ತಂಡದ ಹೋರಾಟ ಅಂತ್ಯಗೊಂಡ ಬೆನ್ನಲ್ಲೇ ಈ ನಿರ್ಧಾರ ಪ್ರಕಟಿಸಿದ್ದಾರೆ. ಆದರೆ ರಣಜಿ ಟ್ರೋಫಿಗೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.

Former India All Rounder Rishi Dhawan Retires From Limited Over Cricket kvn

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ರಿಷಿ ಧವನ್, ದೇಶಿಯ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ತಮ್ಮ ತಂಡದ ಹೋರಾಟ ಅಂತ್ಯವಾಗುತ್ತಿದ್ದಂತೆಯೇ ತಮ್ಮ ದೇಶಿ ಕ್ರಿಕೆಟ್ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ರಿಷಿ ಧವನ್, ಭಾರತ ಪರ 3 ಏಕದಿನ ಹಾಗೂ ಒಂದು ಟಿ20 ಪಂದ್ಯವನ್ನಾಡಿದ್ದಾರೆ. 2024ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡವು ನಾಕೌಟ್‌ ಹಂತಕ್ಕೇರಲು ವಿಫಲವಾಗಿರುವ ಬೆನ್ನಲ್ಲೇ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಆದರೆ ಇದೇ ವೇಳೆ ಜನವರಿ 23ರಿಂದ ಪುನರಾರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಗೆ ತಾವು ಲಭ್ಯವಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಭಾರತೀಯ ಕ್ರಿಕೆಟ್‌ನ ಸೀಮಿತ ಓವರ್‌ಗಳ ಕ್ರಿಕೆಟ್‌ ಮಾದರಿಗೆ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ಈ ಕ್ರೀಡೆ ನನ್ನ ಬದುಕಿನ ಭಾಗವಾಗಿತ್ತು. ನಾನಿಂದು ಭಾರವಾದ ಹೃದಯದಿಂದ ನಿವೃತ್ತಿ ನಿರ್ಧಾರವನ್ನು ಪ್ರಕಟಿಸುತ್ತಿದ್ದೇನೆ. ನಾವು ಈಗ ನಿವೃತ್ತಿಯಾಗುತ್ತಿರುವುದಕ್ಕೆ ಯಾವುದೇ ಬೇಸರವಿಲ್ಲ ಎಂದು 34 ವರ್ಷದ ರಿಷಿ ಧವನ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಕ್ರೀಡೆ ನನಗೆ ಅಪಾರ ಸಂತೋಷ ಹಾಗೂ ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಟ್ಟಿದೆ. ಹೀಗಾಗಿ ಈ ಕ್ರಿಕೆಟ್ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು ಎಂದು ರಿಷಿ ಧವನ್ ತಮ್ಮ ಕ್ರಿಕೆಟ್ ಜತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ. 

ರಿಷಿ ಧವನ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಒಟ್ಟಾರೆ 134 ಪಂದ್ಯಗಳನ್ನಾಡಿ 2906 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 186 ವಿಕೆಟ್ ಕಬಳಿಸಿದ್ದಾರೆ. ಇನ್ನು 135 ಟಿ20 ಪಂದ್ಯಗಳನ್ನಾಡಿ 1740 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲಿ 118 ವಿಕೆಟ್ ಕಬಳಿಸಿದ್ದಾರೆ. ರಿಷಿ ಧವನ್ 2013ರಿಂದ 2024ರ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಹೆಚ್ಚು ಗಮನ ಸೆಳೆಯಲು ರಿಷಿ ಧವನ್‌ಗೆ ಸಾಧ್ಯವಾಗಿರಲಿಲ್ಲ.

Latest Videos
Follow Us:
Download App:
  • android
  • ios