ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನ ನೂತನ ಸಿಇಒ ಆಗಿ ಭಾರತದ ಸಂಜೋಗ್ ಗುಪ್ತಾ ನೇಮಕಗೊಂಡಿದ್ದಾರೆ. ಜೆಫ್ ಅಲಾರ್ಡೈಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುಪ್ತಾ ಆಯ್ಕೆಯಾಗಿದ್ದು, ಐಸಿಸಿಯ ಏಳನೇ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ನಲ್ಲಿ ಭಾರತೀಯರ ಪಾರುಪತ್ಯ ಮುಂದುವರೆದಿದ್ದು, ಭಾರತದ ಸಂಜೋಗ್ ಗುಪ್ತಾ ನೂತನ ಸಿಇಒ ಆಗಿ ನೇಮಕವಾಗಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದ ಜೆಫ್ ಅಲಾರ್ಡೈಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುಪ್ತಾ ಆಯ್ಕೆಯಾಗಿದ್ದಾರೆ. ಇದೀಗ ಸಂಜೋಗ್ ಗುಪ್ತಾ ಐಸಿಸಿಯ ಏಳನೇ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
'ಸಂಜೋಗ್ ಗುಪ್ತಾ ಐಸಿಸಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ನಾನು ಸಂತೋಷ ಪಡುತ್ತೇನೆ. ಸಂಜೋಗ್ ಅವರ ಕ್ರೀಡಾ ಅನುಭವ ತಂತ್ರಗಾರಿಕೆ ಹಾಗೂ ವಾಣಿಜ್ಯನುಭವಗಳು ನಮ್ಮ ಐಸಿಸಿಗೆ ಅಮೂಲ್ಯವಾಗಿದೆ' ಎಂದು ಐಸಿಸಿ ಮುಖ್ಯಸ್ಥ ಜಯ್ ಶಾ ಹೇಳಿದ್ದಾರೆ.
ಯಾರು ಈ ಸಂಜೋಗ್ ಗುಪ್ತಾ?
"ಭಾರತ ಮತ್ತು ಜಾಗತಿಕವಾಗಿ ಕ್ರೀಡಾ ಪ್ರಸಾರದ ರೂಪಾಂತರದ ಹಿಂದಿನ ಪ್ರೇರಕ ಶಕ್ತಿಯಾಗಿ ಸಂಜೋಗ್ ಗುಪ್ತಾ ಗುರುತಿಸಿಕೊಂಡಿದ್ದಾರೆ. ಐಸಿಸಿ ಈವೆಂಟ್‌ಗಳು ಮತ್ತು ಐಪಿಎಲ್‌ನಂತಹ ಮಾರ್ಕ್ಯೂ ಕ್ರಿಕೆಟ್ ಟೂರ್ನಿಯ ನಿರಂತರ ಬೆಳವಣಿಗೆಯನ್ನು ರೂಪಿಸುವಲ್ಲಿ, ಪಿಕೆಎಲ್ ಮತ್ತು ಐಎಸ್‌ಎಲ್‌ನಂತಹ ದೇಶೀಯ ಕ್ರೀಡಾ ಲೀಗ್‌ಗಳನ್ನು ಸ್ಥಾಪಿಸುವಲ್ಲಿ, ಪ್ರೀಮಿಯರ್ ಲೀಗ್ ಮತ್ತು ವಿಂಬಲ್ಡನ್‌ನಂತಹ ಜಾಗತಿಕ ಕ್ರೀಡಾಕೂಟಗಳ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಮತ್ತು ಗ್ರಾಹಕ ಮತ್ತು ವಾಣಿಜ್ಯ ಉದ್ದೇಶಗಳಾದ್ಯಂತ ವ್ಯವಹಾರವನ್ನು ಅಳೆಯುವಲ್ಲಿ ಸಂಜೋಗ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರು ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2010 ರಲ್ಲಿ ಸ್ಟಾರ್ ಇಂಡಿಯಾ (ಈಗ ಜಿಯೋಸ್ಟಾರ್) ಸೇರಿದರು. ಅವರು 2020 ರಲ್ಲಿ ಡಿಸ್ನಿ & ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ಮುಖ್ಯಸ್ಥರಾಗುವ ಮೊದಲು ವಿಷಯ, ಪ್ರೋಗ್ರಾಮಿಂಗ್ ಮತ್ತು ಸ್ಟ್ರಾಟರ್ಜಿ ಬಹು ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದರು. ಅವರ ಉಸ್ತುವಾರಿಯಲ್ಲಿ, ಸ್ಟಾರ್ ಇಂಡಿಯಾದಲ್ಲಿನ ಕ್ರೀಡಾ ಪೋರ್ಟ್ಫೋಲಿಯೊವು ದೀರ್ಘಾವಧಿಯ ಬೆಳವಣಿಗೆ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಬಲವಾದ ಒತ್ತು ನೀಡುವ ಮೂಲಕ ಗ್ರಾಹಕ ಮತ್ತು ವಾಣಿಜ್ಯ ಉದ್ದೇಶಗಳು ದೇಶಾದ್ಯಂತ ವಿಸ್ತರಿಸಿತು.
ವಯಾಕಾಮ್18 ಮತ್ತು ಡಿಸ್ನಿ ಸ್ಟಾರ್ ವಿಲೀನದ ನಂತರ, ನವೆಂಬರ್ 2024 ರಲ್ಲಿ ಸಂಜೋಗ್ ಅವರನ್ನು ಜಿಯೋಸ್ಟಾರ್ ಸ್ಪೋರ್ಟ್ಸ್‌ನ ಸಿಇಒ ಆಗಿ ನೇಮಿಸಲಾಯಿತು, ಇದು ಪ್ರಬಲವಾದ ಹೊಸ ಕ್ರೀಡಾ ಮಾಧ್ಯಮ ಘಟಕವನ್ನು ರೂಪಿಸಿತು. ವ್ಯವಹಾರದ ವಿಚಾರದಲ್ಲಿ ಸಾಕಷ್ಟು ಚುರುಕುತನ ಮತ್ತು ಸೃಜನಶೀಲ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ಅವರು, ಮಾಧ್ಯಮ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಗಳಲ್ಲಿ ನಿರಂತರವಾಗಿ ಹೊಸತನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹುದ್ದೆಗೆ 25 ದೇಶಗಳ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು ಅದರಲ್ಲಿ 12 ಅಭ್ಯರ್ಥಿಗಳ ಹೆಸರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದ್ದು, ಆ ಪೈಕಿ ಗುಪ್ತಾ ನೇಮಕಗೊಂಡಿದ್ದಾರೆ.
"ನಾವು ಈ ಐಸಿಸಿ ಸಿಇಒ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಸಾಕಷ್ಟು ಅತ್ಯದ್ಭುತ ಪ್ರತಿಭಾನ್ವಿತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ನಾಮಿನೇಷನ್ಸ್ ಕಮಿಟಿಯು ಅವಿರೋಧವಾಗಿ ಸಂಜೋಗ್ ಗುಪ್ತಾ ಅವರ ಹೆಸರನ್ನು ಶಿಫಾರಸು ಮಾಡಿತು. ಇದೀಗ ಐಸಿಸಿ ಬೋರ್ಡ್ ಡೈರೆಕ್ಟರ್‌ಗಳು ಸಂಜೋಗ್ ಗುಪ್ತಾ ಅವರ ಜತೆಜತೆಯಾಗಿ ಕೆಲಸ ಮಾಡಲು ರೆಡಿಯಾಗಿದ್ದಾರೆ. ಐಸಿಸಿ ಪರವಾಗಿ ನಾನು ಅವರನ್ನು ಸ್ವಾಗತಿಸುತ್ತೇನೆ" ಎಂದು ಐಸಿಸಿ ಮುಖ್ಯಸ್ಥ ಜಯ್ ಶಾ ಹೇಳಿದ್ದಾರೆ.
2028ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಪಾಲ್ಗೊಳ್ಳಲಿವೆ. ಶತಮಾನದ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದ್ದು, ಈ ಜಾಗತಿಕ ಕ್ರೀಡಾ ಹಬ್ಬದಲ್ಲಿ ಕ್ರಿಕೆಟ್ ಟೂರ್ನಿಯನ್ನು ಅಚ್ಚುಕಟ್ಟಾಗಿ ಆಯೋಜಿಸುವ ಜವಾಬ್ದಾರಿ ಐಸಿಸಿ ಮೇಲಿದೆ.
