* ರಾಹುಲ್ ದ್ರಾವಿಡ್ ಅವರಿಂದ ತೆರವಾದ ಎನ್‌ಸಿಎ ಮುಖ್ಯಸ್ಥರ ಹುದ್ದೆ* ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥರಾಗುವುದು ಖಚಿತ* ಡಿಸೆಂಬರ್ ವೇಳೆಗೆ ಲಕ್ಷ್ಮಣ್‌ ಅಧಿಕಾರ ಸ್ವೀಕರಿಸುವ ಸಾಧ್ಯತೆ

ಬೆಂಗಳೂರು(ನ.14): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್‌ (VVS Laxman) ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(National Cricket Academy)ಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆಂದು ವರದಿಯಾಗಿದೆ.

ಟೀಂ ಇಂಡಿಯಾ (Team India) ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆ ಸ್ವೀಕರಿಸುತ್ತಿದ್ದಂತೆಯೆ ಎನ್‌ಸಿಎ ಮುಖ್ಯಸ್ಥ ಹುದ್ದೆ ತೆರವಾಗಿತ್ತು. ಇದರ ಬೆನ್ನಲ್ಲೇ ಎನ್‌ಸಿಎ ಮುಖ್ಯಸ್ಥ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿತ್ತು. ವಿವಿಎಸ್‌ ಲಕ್ಷ್ಮಣ್‌ ಬಿಸಿಸಿಐ ಮೊದಲ ಆಯ್ಕೆಯಾಗಿತ್ತು ಎಂದು ಸಹ ವರದಿಯಾಗಿತ್ತು. 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದವರೆಗೂ ವಿವಿಎಸ್‌ ಲಕ್ಷ್ಮಣ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮೆಂಟರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಸಾಕಷ್ಟು ಸಮಯ ತೆಗೆದುಕೊಂಡು ನ್ಯಾಷನಲ್ ಕ್ರಿಕೆಟ್ ಅಕಾಡಮಿಯ ಮುಖ್ಯಸ್ಥರಾಗಲು ಒಪ್ಪಿಕೊಂಡಿದ್ದಾರೆ ಎಂದು ಸ್ಪೋರ್ಟ್ಸ್‌ಸ್ಟಾರ್ ವರದಿ ಮಾಡಿದೆ.

ವಿವಿಎಸ್‌ ಲಕ್ಷ್ಮಣ್‌ ಜತೆ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಹಾಗೂ ಕಾರ್ಯದರ್ಶಿ ಜಯ್‌ ಶಾ ದುಬೈನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಲಕ್ಷ್ಮಣ್‌ ಸಮಯಾವಕಾಶ ಕೇಳಿದ್ದರು ಎಂದು ಸಹ ವರದಿಯಾಗಿದೆ. ಇದೀಗ ಡಿಸೆಂಬರ್ ವೇಳೆಗೆ 47 ವರ್ಷದ ಲಕ್ಷ್ಮಣ್‌ ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

ಎನ್‌ಸಿಎ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮುನ್ನ ವಿವಿಎಸ್ ಲಕ್ಷ್ಮಣ್‌ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡದಲ್ಲಿ ತಾವು ಹೊಂದಿರುವ ಅಧಿಕಾರಕ್ಕೆ ರಾಜಿನಾಮೆ ಸಲ್ಲಿಸಬೇಕಾಗಿದೆ. ಇದಷ್ಟೇ ಅಲ್ಲದೇ ವೀಕ್ಷಕ ವಿವರಣೆಗಾರಿಕೆ ಹಾಗೂ ಮಾಧ್ಯಮಗಳ ಜತೆ ಹೊಂದಿರುವ ಒಪ್ಪಂದಗಳಿಗೂ ಗುಡ್‌ ಬೈ ಹೇಳಬೇಕಿದೆ. ಸಹ ಆಟಗಾರ ರಾಹುಲ್ ದ್ರಾವಿಡ್‌ ಜತೆ ಮಾತುಕತೆ ನಡೆಸಿದ ಬಳಿಕ ಲಕ್ಷ್ಮಣ್ ಎನ್‌ಸಿಎ ಹುದ್ದೆ ಸ್ವೀಕರಿಸಲಿದ್ದಾರೆ.

Syed Mushtaq Ali Trophy : ನಾಕೌಟ್ ಪಂದ್ಯಕ್ಕೆ ಕರ್ನಾಟಕ ಕ್ರಿಕೆಟ್ ತಂಡ ಪ್ರಕಟ, 4 ಮಹತ್ವದ ಬದಲಾವಣೆ..!

2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿವಿಎಸ್ ಲಕ್ಷ್ಮಣ್‌, ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಇದಷ್ಟೇ ಅಲ್ಲದೇ ವಿಷನ್‌ ಯೋಜನೆಯಂತೆ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಪರವಾಗಿ ಲಕ್ಷ್ಮಣ್ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಔಪಚಾರಿಕ ಎನ್ನುವಂತೆ ಬಿಸಿಸಿಐ ಮೊದಲು ಎನ್‌ಸಿಎ ಹುದ್ದೆಗೆ ಅರ್ಜಿ ಆಹ್ವಾನಿಸಲಿದೆ. ಇದಾದ ಬಳಿಕ ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ಲಕ್ಷ್ಮಣ್ ಅಯ್ಕೆಯಾಗಲಿದ್ದಾರೆ.

ರಾಹುಲ್ ದ್ರಾವಿಡ್‌ಗೆ ಸವಾಲಿನ ಸರಣಿ: ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ರಾಜಿನಾಮೆ ನೀಡಿ ಇದೀಗ ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್ ಅಗಿ ಅಧಿಕಾರ ಸ್ವೀಕರಿಸಿರುವ ರಾಹುಲ್‌ ದ್ರಾವಿಡ್‌ಗೆ ಮೊದಲ ಸರಣಿಯಲ್ಲೇ ಅಗ್ನಿಪರೀಕ್ಷೆ ಎದುರಾಗಲಿದೆ. ಹೌದು, ನವೆಂಬರ್ 17ರಿಂದ ಟೀಂ ಇಂಡಿಯಾ ತವರಿನಲ್ಲಿ ಬಲಿಷ್ಠ ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ.

Ind vs NZ ಟಿ20 ಸರಣಿ ವೀಕ್ಷಿಸಲು ಶೇ.100ರಷ್ಟು ಪ್ರೇಕ್ಷಕರಿಗೆ ಅವಕಾಶ, ಆದರೆ ಷರತ್ತುಗಳು ಅನ್ವಯ..!.

ಸದ್ಯ ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದೆ. ಇನ್ನೊಂದೆಡೆ ವಿರಾಟ್ ಕೊಹ್ಲಿ, ಜಡೇಜಾ, ಬುಮ್ರಾ ಹಾಗೂ ಶಮಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೀಮಿತ ಓವರ್‌ಗಳ ಸರಣಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.