* ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ನೂತನ ಬ್ಯಾಟಿಂಗ್ ಕೋಚ್ ನೇಮಕ* ಮಾಜಿ ಕ್ರಿಕೆಟಿಗ ಶಿವ್ ಸುಂದರ್ ದಾಸ್ ಮಹಿಳಾ ತಂಡದ ಬ್ಯಾಟಿಂಗ್ ಕೋಚ್‌* ಇಂಗ್ಲೆಂಡ್‌ ಪ್ರವಾಸಕ್ಕೆ ನೂತನ ಬ್ಯಾಟಿಂಗ್‌ ಕೋಚ್ ನೇಮಿಸಿದ ಬಿಸಿಸಿಐ

ನವದೆಹಲಿ(ಮೇ.18): ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಶಿವ್ ಸುಂದರ್‌ ದಾಸ್ ಭಾರತ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಅಭಯ್ ಶರ್ಮಾ ಫೀಲ್ಡಿಂಗ್ ಕೋಚ್‌ ಪಟ್ಟ ಅಲಂಕರಿಸಿದ್ಧಾರೆ. ಭಾರತ ಮಹಿಳಾ ಕ್ರಿಕೆಟ್‌ ತಂಡವು ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿರುವ ಬೆನ್ನಲ್ಲೇ ಈ ಮಹತ್ವದ ಪ್ರಕಟಣೆ ಹೊರಬಿದ್ದಿದೆ.

ಇನ್ನು ಬಿಸಿಸಿಐ ಸೋಮವಾರ(ಮೇ.17) ತೃಪ್ತಿ ದೇಸಾಯಿಯವರ ಬದಲಿಗೆ ರಾಜ್‌ಕುವಾರ್ ದೇವಿ ಗಾಯಕ್ವಾಡ್‌ ತಂಡದ ಮ್ಯಾನೇಜರ್ ಆಗಿ ನೇಮಿಸಿರುವುದನ್ನು ಖಚಿತಪಡಿಸಿದೆ. ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ ಪ್ರವಾಸದಲ್ಲಿ ಏಕೈಕ ಟೆಸ್ಟ್‌ ಹಾಗೂ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಜೂನ್‌ 02ರಂದು ಇಂಗ್ಲೆಂಡ್‌ಗೆ ವಿಮಾನ ಏರುವ ಮುನ್ನ ಭಾರತ ಮಹಿಳಾ ತಂಡವು ಬುಧವಾರ(ಮೇ.18) ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ.

Scroll to load tweet…

ಶಿವ್ ಸುಂದರ್ ದಾಸ್ ಈ ಮೊದಲ ಭಾರತ ಮಹಿಳಾ 'ಎ' ತಂಡದ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ಬಾರಿಗೆ ಸೀನಿಯರ್ ತಂಡದ ಜತೆ ಕೆಲಸ ಮಾಡಲು ರೆಡಿಯಾಗಿದ್ದಾರೆ. ಇದು ನನಗೆ ಸಿಕ್ಕ ಅತ್ಯಂತ ಮಹತ್ವದ ಅವಕಾಶವಾಗಿದ್ದು, ಮಹಿಳಾ ತಂಡದ ಜತೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಶಿವ್ ಸುಂದರ್ ದಾಸ್ ತಿಳಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ

ಶಿವ್ ಸುಂದರ್ ದಾಸ್ 2000-2002ರ ಅವಧಿಯಲ್ಲಿ ಭಾರತ ಪರ 23 ಟೆಸ್ಟ್ ಹಾಗೂ 4 ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟಾರೆ 1,365 ರನ್‌ ಬಾರಿಸಿದ್ದಾರೆ. ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಬಳಿಕ ಡೊಮೆಸ್ಟಿಕ್‌ ತಂಡಗಳಿಗೆ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಲ್ಲಿ ರಾಹುಲ್ ದ್ರಾವಿಡ್ ಜತೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಶಿವ್ ಸುಂದರ್ ದಾಸ್ ಅವರನ್ನು ಕೇವಲ ಇಂಗ್ಲೆಂಡ್‌ ಪ್ರವಾಸಕ್ಕೆ ಮಾತ್ರ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಶಿವ್ ಸುಂದರ್ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡ ಉತ್ತಮ ಪ್ರದರ್ಶನ ತೋರಿದರೆ ಮತ್ತಷ್ಟು ವರ್ಷಗಳ ಕಾಲ ಶಿವ್ ಸುಂದರ್ ದಾಸ್ ಮಹಿಳಾ ಟೀಂ ಇಂಡಿಯಾ ಜತೆ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ.

ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ರಮೇಶ್ ಪೊವಾರ್‌ ಕೋಚ್‌

ಕಳೆದ ವಾರವಷ್ಟೇ ಮದನ್ ಲಾಲ್‌ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಮಾಡಿದ ಶಿಫಾರಸಿನಂತೆ ರಮೇಶ್‌ ಪೊವಾರ್ ಅವರನ್ನು ಭಾರತ ಮಹಿಳಾ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ. ಒಟ್ಟಾರೆಯಾಗಿ ಹೊಸ ಹೆಡ್‌ ಕೋಚ್‌, ಬ್ಯಾಟಿಂಗ್ ಕೋಚ್‌ ಹಾಗೂ ಮ್ಯಾನೇಜರ್‌ಗಳನ್ನೊಳಗೊಂಡ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.