ಕೆಲ ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಮಿಥಾಲಿ ರಾಜ್ಬಿಜೆಪಿ ಸೇರಿ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರಾ ಮಿಥಾಲಿ ರಾಜ್‌..?ಬಿಜೆಪಿ ನಾಯಕ ಜೆ.ಪಿ. ನಡ್ಡಾರನ್ನು ಭೇಟಿಯಾದ ಮಾಜಿ ನಾಯಕಿ ಮಿಥಾಲಿ

ಹೈದರಾಬಾದ್‌(ಆ.28): ತೆಲಂಗಾಣ ಪ್ರವಾಸ ಕೈಗೊಂಡಿರುವ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶನಿವಾರ, ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ಮಿಥಾಲಿ ರಾಜ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ನಡುವೆಯೇ ಮಿಥಾಲಿ ರಾಜ್‌ ಬಿಜೆಪಿಗೆ ಸೇರ್ಪಡೆಯಾಗಬಹುದು ಎಂಬ ವದಂತಿಗಳು ಹರಿದಾಡುತ್ತಿವೆ. 

‘ಮಾಜಿ ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್‌ ಅವರೊಂದಿಗಿನ ಸಂವಾದ ಉತ್ತಮವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದಲ್ಲಿ ಕ್ರೀಡಾಪಟುಗಳು ಪಡೆದುಕೊಳ್ಳುತ್ತಿರುವ ಪ್ರೋತ್ಸಾಹಕ್ಕೆ ಅವರು ಮೆಚ್ಚುಗೆ ಸೂಚಿಸಿದರು’ ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ. ಟಾಲಿವುಡ್‌ನ ಖ್ಯಾತ ನಟ ಜೂ. ಎನ್‌ಟಿಆರ್‌ ಅವರನ್ನು ಅಮಿತ್‌ ಶಾ ಭೇಟಿಯಾದ ಕೆಲವು ದಿನಗಳ ಬಳಿಕ ನಡ್ಡಾ ಮಿಥಾಲಿ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Scroll to load tweet…

ಹೈದರಾಬಾದ್‌ ಮೂಲದವರಾದ ಮಿಥಾಲಿ ರಾಜ್, ತೆಲಂಗಾಣ ರಾಜ್ಯದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ. ಸುಮಾರು ಎರಡು ದಶಕಗಳ ಭಾರತ ಕ್ರಿಕೆಟ್ ಜಗತ್ತನ್ನು ಆಳಿದ್ದರು. ಭಾರತ ಕ್ರಿಕೆಟ್ ಮಾಜಿ ಆಟಗಾರ್ತಿ ಮಿಥಾಲಿ ರಾಜ್‌, ಭಾರತ ಕ್ರಿಕೆಟ್ ತಂಡದ ಪರ 232 ಏಕದಿನ ಪಂದ್ಯಗಳನ್ನಾಡಿ 50.68ರ ಬ್ಯಾಟಿಂಗ್ ಸರಾಸರಿಯಲ್ಲಿ 7,805 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಮಿಥಾಲಿ ರಾಜ್‌ ಭಾರತ ಪರ 12 ಟೆಸ್ಟ್‌ ಹಾಗೂ 89 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 699 ಹಾಗೂ 2,364 ರನ್ ಬಾರಿಸಿದ್ದಾರೆ.

Ind vs Pak Asia Cup: ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಟೀಮ್‌ ಇಂಡಿಯಾ WAGs!

ಕೆಲ ದಿನಗಳ ಹಿಂದಷ್ಟೇ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್‌ ಅವರು ಕ್ರಿಕೆಟ್‌ಗೆ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರವನ್ನು ಮಿಥಾಲಿಗೆ ಕಳುಹಿಸಿಕೊಟ್ಟಿದ್ದರು. ಪ್ರಧಾನಿಯ ಪ್ರಶಂಸೆಯ ಮಾತುಗಳನ್ನು ಕೇಳಿ ಆನಂದದಲ್ಲಿ ತೇಲಾಡುತ್ತಿದ್ದೇನೆ ಎಂದು ಮಿಥಾಲಿ ಪ್ರತಿಕ್ರಿಯಿಸಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಅವರು, ‘ಭಾರತೀಯ ಕ್ರೀಡೆಗೆ ನನ್ನ ಕೊಡುಗೆಗಳ ಬಗ್ಗೆ ಪ್ರಧಾನಿಯ ಮಾತುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನನಗೆ ಸಿಕ್ಕ ದೊಡ್ಡ ಗೌರವ’ ಎಂದಿದ್ದರು.

ನಿವೃತ್ತಿಯಿಂದ ಹೊರಬರುವ ಮುನ್ಸೂಚನೆ ನೀಡಿದ್ದ ಮಿಥಾಲಿ

ಇತ್ತೀಚೆಗಷ್ಟೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತ ಮಹಿಳಾ ತಂಡದ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್‌ ನಿವೃತ್ತಿಯಿಂದ ಹೊರಬರುವ ಮುನ್ಸೂಚನೆ ನೀಡಿದ್ದಾರೆ. ಇಂಗ್ಲೆಂಡ್‌ನ ಇಶಾ ಗುಹಾ ಹಾಗೂ ನ್ಯೂಜಿಲೆಂಡ್‌ನ ಸ್ಪಿನ್ನರ್‌ ಫ್ರಾಂಕೀ ಮೆಕ್ಕೆ ಜೊತೆಗಿನ ಸಂದರ್ಶನದಲ್ಲಿ, ನಿವೃತ್ತಿಯಿಂದ ಹೊರಬಂದು ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ನಲ್ಲಿ ಆಡುವ ಸಾಧ್ಯತೆಗಳ ಬಗ್ಗೆ ಪ್ರಶ್ನಿಸಿದಾಗ ಮಿಥಾಲಿ ಈ ಬಗ್ಗೆ ಮಾತನಾಡಿದ್ದರು. 

‘ಆ ಆಯ್ಕೆಯನ್ನು ನಾನು ಮುಕ್ತವಾಗಿಟ್ಟುಕೊಂಡಿದ್ದೇನೆ. ಅದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಮಹಿಳಾ ಐಪಿಎಲ್‌ ಆರಂಭಕ್ಕೆ ಇನ್ನೂ ಕೆಲ ತಿಂಗಳುಗಳಿವೆ. ಬಹುನಿರೀಕ್ಷಿತ ಮೊದಲ ಆವೃತ್ತಿಯಲ್ಲಿ ಆಡುವ ಅವಕಾಶ ಸಿಕ್ಕರೆ ಅದು ಅತ್ಯುತ್ತಮ ಕ್ಷಣ’ ಎಂದಿದ್ದಾರೆ. 1999ರಲ್ಲಿ ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ್ದ ಮಿಥಾಲಿ 23 ವರ್ಷಗಳ ಕಾಲ ಭಾರತ ತಂಡದ ಪರ ಆಡಿದ್ದರು.