ಕೋಲ್ಕತ(ಮೇ.11): ಇತ್ತೀಚೆಗಷ್ಟೇ ಮುಕ್ತಾಯವಾದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅತಿಹೆಚ್ಚು ಕುತೂಹಲ ಕೆರಳಿಸಿದ್ದ ವಿಧಾನಸಭಾ ಚುನಾವಣೆ ಎಂದರೆ ಅದು ಪಶ್ಚಿಮ ಬಂಗಾಳ ಚುನಾವಣೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಎಲ್ಲಾ ಸಮೀಕ್ಷೆಗಳನ್ನು ಮೀರಿ 3ನೇ ಬಾರಿಗೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇದೀಗ ಸೋಮವಾರ(ಮೇ.11), ಕೋಲ್ಕತದ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿಗೂ ಅದೃಷ್ಟ ಖುಲಾಯಿಸಿದ್ದು, ರಾಜ್ಯದ ಕ್ರೀಡಾಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಬಿಜೆಪಿ ಆಹ್ವಾನ ಧಿಕ್ಕರಿಸಿ ಚುನಾವಣೆ ಗೆದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

ಶಿವ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನೋಜ್ ತಿವಾರಿ, ಬಿಜೆಪಿಯ ರತನ್ ಚಕ್ರವರ್ತಿ ವಿರುದ್ದ 6 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮನೋಜ್ ತಿವಾರಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಮನೋಜ್ ತಿವಾರಿ, ''ಹೊಸ ದಾರಿ ಆರಂಭವಾಗಿದೆ" ಎಂದು ಬರೆದುಕೊಂಡಿದ್ದಾರೆ. 

ಬರೋಬ್ಬರಿ 16 ವರ್ಷಗಳ ಸುದೀರ್ಘ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಮನೋಜ್ ತಿವಾರಿ 50.36ರ ಬ್ಯಾಟಿಂಗ್‌ ಸರಾಸರಿಯಲ್ಲಿ 8965 ರನ್‌ ಬಾರಿಸಿದ್ದಾರೆ. ಇನ್ನು ಭಾರತ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರ ಜತೆಗೆ ತಿವಾರಿ 2012ರ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಸದಸ್ಯರೂ ಕೂಡಾ ಹೌದು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಒಟ್ಟು 294 ಸ್ಥಾನಗಳ ಪೈಕಿ ತೃಣಮೂಲ ಕಾಂಗ್ರೆಸ್ ಪಕ್ಷವು 215 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದರೆ, ಭಾರತೀಯ ಜನತಾ ಪಕ್ಷ ಕೇವಲ 75 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನು ಕಾಂಗ್ರೆಸ್ ಕೇವಲ ಒಂದು ಹಾಗೂ ಇತರರು 4 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದರು.