ಮುಂಬೈ(ಅ.17): ಭಾರತ ಪುರುಷರ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಗೆ ಮೂವರು ನೂತನ ಸದಸ್ಯರ ನೇಮಕವಾಗಬೇಕಿದ್ದು, ಅದಕ್ಕಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಭಾನುವಾರ (ನ.15) ಕೊನೆ ದಿನವಾಗಿತ್ತು. ಟೀಂ ಇಂಡಿಯಾದ ಮಾಜಿ ವೇಗಿಗಳಾದ ಅಜಿತ್‌ ಅಗರ್ಕರ್‌, ಚೇತನ್‌ ಶರ್ಮಾ, ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಶಿವಸುಂದರ್‌ ದಾಸ್‌, ಮಾಜಿ ಸ್ಪಿನ್ನರ್‌ ಮಣೀಂದರ್‌ ಸಿಂಗ್‌ ಅರ್ಜಿ ಸಲ್ಲಿಸಿರುವ ಪ್ರಮುಖರಾಗಿದ್ದಾರೆ. 

ಆಯ್ಕೆ ಸಮಿತಿಯಲ್ಲಿ ಸದ್ಯ ಸುನಿಲ್‌ ಜೋಶಿ ಹಾಗೂ ಹರ್ವಿಂದರ್‌ ಸಿಂಗ್‌ ಇದ್ದು, ಮೂವರನ್ನು ಹೊಸದಾಗಿ ಸೇರ್ಪಡೆಗೊಳಿಸಬೇಕಿದೆ. ಒಂದೊಮ್ಮೆ ಅಗರ್ಕರ್‌ ನೇಮಕಗೊಂಡರೆ, ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಆಧಾರದ ಮೇಲೆ ಜೋಶಿ ಬದಲಿಗೆ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೇರಬಹುದು ಎನ್ನಲಾಗಿದೆ.

ಆಸೀಸ್‌ನಲ್ಲಿ ನೆಟ್ಸ್ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ..!

ಬಂಗಾಳದ ಮಾಜಿ ವೇಗಿ ರಣದೇಬ್‌ ಬೋಸ್‌ ಸಹ ಅರ್ಜಿ ಹಾಕಿದ್ದು, ಅವರನ್ನು ಕಿರಿಯರ ಆಯ್ಕೆ ಸಮಿತಿಗೆ ನೇಮಿಸಿ, ಸದ್ಯ ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಮಾಜಿ ವೇಗಿ ದೇಬಾಶಿಶ್‌ ಮೊಹಂತಿ ಅವರನ್ನು ಹಿರಿಯರ ತಂಡದ ಆಯ್ಕೆ ಸಮಿತಿಗೆ ನೇಮಕ ಮಾಡಬಹುದು ಎಂದು ಮೂಲಗಳು ತಿಳಿಸಿವೆ.