ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೇರಲು ಟೀಂ ಇಂಡಿಯಾ ವಿಫಲಇಂಗ್ಲೆಂಡ್ ಎದುರು 10 ವಿಕೆಟ್‌ಗಳ ಸೋಲು ಅನುಭವಿಸಿದ ಭಾರತಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶ
ಅಡಿಲೇಡ್(ನ.11): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕಪ್ ಗೆಲ್ಲದೇ ಆಸ್ಟ್ರೇಲಿಯಾದ ಕಡಲ ತೀರವನ್ನು ತೊರೆದು ವಾಪಸ್ಸಾಗುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಭಾವನಾತ್ಮಕವಾಗಿ ತಮ್ಮ ನೋವನ್ನು ಹೊರಹಾಕಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಫೈನಲ್‌ಗೇರಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿತ್ತು. ಆದರೆ ನವೆಂಬರ್ 10ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಆರಂಭಿಕರಾದ ಅಲೆಕ್ಸ್ ಹೇಲ್ಸ್ ಹಾಗೂ ನಾಯಕ ಜೋಸ್ ಬಟ್ಲರ್ ಜೋಡಿ ಮುರಿಯದ 170 ರನ್‌ಗಳ ದಾಖಲೆಯ ಜತೆಯಾಟವಾಡುವ ಮೂಲಕ ತಮ್ಮ ತಂಡವನ್ನು ಫೈನಲ್‌ಗೇರಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ರೋಹಿತ್ ಪಡೆಯ ಫೈನಲ್‌ಗೇರುವ ಕನಸು ನುಚ್ಚುನೂರಾಯಿತು.
T20 World Cup ಟೀಂ ಇಂಡಿಯಾ ಸೆಮೀಸ್ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್ ದ್ರಾವಿಡ್..!
ನಾವು ಆಸ್ಟ್ರೇಲಿಯಾದ ಕಡಲತೀರಗಳನ್ನು ನಮ್ಮ ಕನಸನ್ನು ಕೈಚೆಲ್ಲಿ ನಿರಾಸೆಯೊಂದಿಗೆ ಭಾರವಾದ ಹೃದಯದೊಂದಿಗೆ ಹಿಂತಿರುಗುತ್ತಿದ್ದೇವೆ. ಆದರೆ ನಾವು ಒಂದು ತಂಡವಾಗಿ ಸಾಕಷ್ಟು ಸ್ಮರಣೀಯ ಕ್ಷಣಗಳನ್ನು ಹೊತ್ತು ಸಾಗಬಹುದಷ್ಟೆ. ಮೈದಾನಕ್ಕೆ ದೊಡ್ಡ ಪ್ರಮಾಣದಲ್ಲಿ ಬಂದು ನಮ್ಮನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಅನಂತ ಧನ್ಯವಾದಗಳು. ಈ ಜೆರ್ಸಿ ತೊಟ್ಟು ನಮ್ಮ ದೇಶವನ್ನು ಪ್ರತಿನಿಧಿಸುವಾಗ ಯಾವಗಲೂ ನಮಗೆ ಹೆಮ್ಮೆ ಎನಿಸುತ್ತದೆ ಎಂದು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭದಲ್ಲೇ ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಹಾರ್ದಿಕ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತ್ತು. ಆದರೆ ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಈ ಗುರಿ ಸವಾಲೆನಿಸಲೇ ಇಲ್ಲ. ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್, ಭುವನೇಶ್ವರ್ ಕುಮಾರ್ ಹಾಗೂ ರವಿಚಂದ್ರನ್ ಅಶ್ವಿನ್ ಅವರ ಎದುರು ಮೈ ಚಳಿ ಬಿಟ್ಟು ಬ್ಯಾಟ್ ಬೀಸಿದ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಜೋಡಿ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
