RIP Shane Warne ಬಳಿ ನಾನು ಆ ಮೂರು ಪದ ಹೇಳಬೇಕಿತ್ತು: ಕಂಬನಿ ಮಿಡಿದ ರಿಕಿ ಪಾಂಟಿಂಗ್
* ಹೃದಯಾಘಾತದಿಂದ ಥಾಯ್ಲೆಂಡ್‌ನಲ್ಲಿ ಕೊನೆಯುಸಿರೆಳೆದ ಶೇನ್ ವಾರ್ನ್
* ಶೇನ್ ವಾರ್ನ್ ನಿಧನಕ್ಕೆ ಜಗತ್ತಿನಾದ್ಯಂತ ಕಂಬನಿ ಮಿಡಿದ ಸಹ ಆಟಗಾರರು ಹಾಗೂ ಅಭಿಮಾನಿಗಳು
* ಶೇನ್ ವಾರ್ನ್ ನಿಧನಕ್ಕೆ ನುಡಿ ನಮನ ಸಲ್ಲಿಸಿದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್
ಮೆಲ್ಬೊರ್ನ್(ಮಾ.07): ವಿಶ್ವಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ (Shane Warne) ನಿಧನರಾದ ಸುದ್ದಿ ಇಡೀ ಕ್ರಿಕೆಟ್ ಜಗತ್ತನ್ನೇ ತಬ್ಬಿಬ್ಬುಗೊಳಿಸಿದೆ. ಈ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲು ವಾರ್ನ್ ಸಹ ಆಟಗಾರರಾಗಿದ್ದ ರಿಕಿ ಪಾಂಟಿಂಗ್‌ಗೆ (Ricky Ponting) ಇನ್ನೂ ಸಾಧ್ಯವಾಗಿಲ್ಲ. ಹಾಲಿಡೇ ಎಂಜಾಯ್ ಮಾಡಲು ಥಾಯ್ಲೆಂಡ್‌ನ ಕೋಹ್ ಸಾಮಯಿ ದ್ವೀಪದಲ್ಲಿನ ಐಷಾರಾಮಿ ವಿಲ್ಲಾದಲ್ಲಿರುವಾಗಲೇ 52 ವರ್ಷದ ಶೇನ್ ವಾರ್ನ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಐಸಿಸಿ ರಿವ್ಯೂ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟ್ ಆಟಗಾರ್ತಿ ಇಶ್ ಗುಹಾ ಜತೆಗೆ ಮಾತನಾಡಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, ಶೇನ್ ವಾರ್ನ್ ನಿಧನದ ಸುದ್ದಿ ಕೇಳಿ ತಾವೆಷ್ಟು ಆಘಾತಕ್ಕೊಳಗಾಗಿದ್ದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ. ಇದರ ಜತೆಗೆ ದಿಗ್ಗಜ ಆಟಗಾರನಿಗೆ ತಾವೇನು ಕೊನೆಯದಾಗಿ ಹೇಳಬೇಕಿತ್ತು ಎನ್ನುವ ಸತ್ಯವನ್ನು ಹೊರಗೆಡವಿದ್ದಾರೆ. ಒಂದು ವೇಳೆ ಕೊನೆಯ ಬಾರಿಗೆ ವಾರ್ನ್ ಜತೆ ಮಾತನಾಡಲು ಅವಕಾಶ ಸಿಕ್ಕಿದ್ದರೆ, ನೀವೇನು ಹೇಳಲು ಬಯಸುತ್ತೀರಾ ಎನ್ನುವ ಪ್ರಶ್ನೆಗೆ ನಾನು ಅವರನ್ನು ಎಷ್ಟು ಇಷ್ಟಪಡುತ್ತಿದ್ದೆ ಎನ್ನುವುದನ್ನು ಹೇಳಬೇಕಿತ್ತು ಎಂದು ಕಂಬನಿ ತುಂಬಿದ ದುಃಖದಲ್ಲಿ ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ. ಕೊನೆಯದಾಗಿ ನಾನೇನು ಹೇಳುಬೇಕು ಅಂದುಕೊಂಡಿದ್ದೆನೋ ಅದನ್ನು ಹೇಳಲು ನನಗೆ ಸಾಧ್ಯವಾಗಲಿಲ್ಲ ಎಂದು ಪಾಂಟಿಂಗ್ ಕಣ್ಣೀರಿಟ್ಟಿದ್ದಾರೆ.
ಶೇನ್ ವಾರ್ನ್, ಥಾಯ್ಲೆಂಡ್‌ನ ಕೋಹ್ ಸಾಮಯಿ ದ್ವೀಪದಲ್ಲಿನ ವಿಲ್ಲಾದಲ್ಲಿ ಮಾರ್ಚ್ 05ರಂದು ಕೊನೆಯುಸಿರೆಳೆದಿದ್ದರು. ವಿಲ್ಲಾದಲ್ಲಿ ವಾರ್ನ್ ನಿಸ್ತೇಜ ಸ್ಥಿತಿಯಲ್ಲಿ ಬಿದ್ದಿದನ್ನು ಗಮನಿಸಿದ ಸ್ನೇಹಿತರೊಬ್ಬರು, ಶೇನ್ ವಾರ್ನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಅಷ್ಟರಲ್ಲಾಗಲೇ ವಾರ್ನ್ ಕೊನೆಯುಸಿರೆಳೆದಿದ್ದರು. ವಿಪರ್ಯಾವೆಂದರೆ ಮಾರ್ಚ್ 05ರ ಮುಂಜಾನೆ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಾಡ್ ಮಾರ್ಶ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ರಾಡ್ ಮಾರ್ಶ್ ನಿಧನಕ್ಕೆ ಸ್ವತಃ ಶೇನ್ ವಾರ್ನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದರು. ಆದರೆ ಸಂಜೆ ವೇಳೆಗಾಗಲೇ ಸ್ವತಃ ಶೇನ್ ವಾರ್ನ್ ಅವರೇ ಕೊನೆಯುಸಿರೆಳೆದಿದ್ದರು.
ನಾನು ಬೆಳಗ್ಗೆ ಬೇಗ ಎದ್ದು, ಮಕ್ಕಳ ಜತೆ ನೆಟ್ ಬಾಲ್ ಆಡವುದಕ್ಕೆ ತೆರಳಲು ಸಿದ್ದನಾಗುತ್ತಿದ್ದೆ. ಆಗ ಪತ್ನಿ ರಿಯಾನ್ನಾ ಪೋನ್ ನೋಡಿ, ವಾರ್ನ್ ಅವರು ನಿಧನರಾಗಿರುವ ಸುದ್ದಿ ಹೇಳಿದರು. ತಕ್ಷಣ ಓಡೋಡಿ ಬಂದು ಪೋನ್ ನೋಡಿದೆ. ನನಗಂತೂ ನಂಬಲು ಸಾಧ್ಯವಾಗಲೇ ಇಲ್ಲ. ಈಗಲೂ ಅಷ್ಟೇ ನಂಬಲು ಸಾಧ್ಯವಾಗುತ್ತಿಲ್ಲ. ಈಗಲೂ ಆ ಬಗ್ಗೆ ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಈಗಲೂ ಸಹಾ ನಾನು ಟಿವಿಯಲ್ಲಿ ವಾರ್ನ್‌ಗೆ ನುಡಿನಮನ ಸಲ್ಲಿಸುವುದನ್ನು ನೋಡುತ್ತಿದ್ದೇನೆ. ಆದರೆ ಪ್ರತಿಭಾರಿ ಅವರ ಧ್ವನಿ ಕೇಳಿದಾಗ, ಟಿವಿ ಆಫ್ ಮಾಡುತ್ತಿದ್ದೇನೆ ಎಂದು ಪಾಂಟಿಂಗ್ ಹೇಳಿದ್ದಾರೆ.
Shane Warne ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ಕೋಣೆ, ಟವೆಲ್‌ನಲ್ಲಿ ರಕ್ತದ ಕಲೆ ಪತ್ತೆ..!
ಇನ್ನು ಇದೇ ವೇಳೆ ರಿಕಿ ಪಾಂಟಿಂಗ್, ಶೇನ್ ವಾರ್ನ್ ಅವರ ಧನಾತ್ಮಕ ಮನೋಭಾವ ಹಾಗೂ ಯುವ ಆಟಗಾರರನ್ನು ಹುರಿದುಂಬಿಸುತ್ತಿದ್ದ ರೀತಿಯನ್ನು ಗುಣಗಾನ ಮಾಡಿದ್ದಾರೆ. ಕಾಮೆಂಟ್ರಿ ಮಾಡುವಾಗ ಅವರೊಬ್ಬ ಒಳ್ಳೆಯ ಟೀಚರ್ ಆಗಿದ್ದರು. ಕಳೆದ 24 ಗಂಟೆಗಳ ಅವಧಿಯಲ್ಲಿ ಶೇನ್ ವಾರ್ನ್ ಜತೆ ಮಾರ್ಗದರ್ಶನ ಪಡೆದ ನೂರಾರು ಸ್ಪಿನ್ನರ್‌ಗಳ ಫೋಟೋವನ್ನು ಗಮನಿಸಿದ್ದೇನೆ. ಸ್ಟೀವ್ ಸ್ಮಿತ್ ಅವರ ಆರಂಭಿಕ ದಿನಗಳಲ್ಲಿ ಬೌಲಿಂಗ್ ಮಾಡಲು ವಾರ್ನ್ ಮಾರ್ಗದರ್ಶನ ಮಾಡಿದ್ದರು. ಇನ್ನು ರಶೀದ್ ಖಾನ್ ಕೂಡಾ ಶೇನ್ ವಾರ್ನ್ ಬಳಿ ನೆರವು ಪಡೆದುಕೊಂಡಿದ್ದರು. ಸುಮ್ಮನೆ ಯೋಚಿಸಿ ಅವರ ನಡುವೆ ಮಾತುಕತೆ ಹೇಗಿರುತ್ತಿತ್ತು ಎಂದು ಪಾಂಟಿಂಗ್ ಮಾತು ಮುಗಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ(708) ಹಾಗೂ ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶೇನ್ ವಾರ್ನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ 2013ರಲ್ಲಿ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ವಾರ್ನ್ ಗುರುತಿಸಿಕೊಂಡಿದ್ದರು.