16ನೇ ಆವೃತ್ತಿಯ ಐಪಿಎಲ್‌ನ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಫ್ರಾಂಚೈಸಿಗಳು ತವರಿನ ಪಂದ್ಯಗಳ ಟಿಕೆಟ್‌ ಮಾರಾಟ ಪ್ರಕ್ರಿಯೆಯನ್ನು ಆರಂಭ ಮಾಡಿದ್ದಾರೆ. ಅದರಂತೆ ಆರ್‌ಸಿಬಿ ಕೂಡ ತನ್ನ ಎಂಟೂ ಪಂದ್ಯಗಳ ಆನ್‌ಲೈನ್‌ ಟಿಕೆಟ್‌ ಮಾರಾಟವನ್ನು ಪ್ರಕಟಿಸಿದೆ. 

ಬೆಂಗಳೂರು (ಮಾ.16): ಬಹುನಿರೀಕ್ಷಿತ ಐಪಿಎಲ್‌ ತನ್ನ ಎಂದಿನ ಮಾದರಿಗೆ ಮರಳಿದೆ. ಈ ಬಾರಿ ಎಲ್ಲಾ ಫ್ರಾಂಚೈಸಿಗಳಿಗೆ ತವರಿನ ಲಾಭ ಸಿಗಲಿದೆ. ಅದರಂತೆ ಆರ್‌ಸಿಬಿ ಕೂಡ ತನ್ನ ತವರು ಮೈದಾನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಟು ಪಂದ್ಯಗಳನ್ನು ಆಡಲಿದೆ. ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು 16ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಲಿದ್ದು, ಮಾರ್ಚ್‌ 31 ರಂದು ಈ ಪಂದ್ಯ ನಡೆಯಲಿದೆ. ಫೈನಲ್‌ ಪಂದ್ಯ ಮೇ 21 ರಂದು ನಿಗದಿಯಾಗಿದ್ದು, 2023ರ ಐಪಿಎಲ್‌ 52 ದಿನಗಳ ಕಾಲ ನಡೆಯಲಿದೆ. ಒಟ್ಟು 70 ಪಂದ್ಯಗಳು ಇರಲಿದ್ದು, 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಮೂರು ಋತುವಿನ ಬಳಿಕ ತವರಿನಲ್ಲಿ ಪಂದ್ಯವನ್ನು ಆಡುತ್ತಿರುವುದಕ್ಕೆ ಸಂಭ್ರಮವಾಗಿದೆ. ಮುಂಬರುವ ಐಪಿಎಲ್‌ಗೆ ಆರ್‌ಸಿಬಿ ತಂಡಗಳ ತವರಿನ ಪಂದ್ಯಗಳ ಟಿಕೆಟ್‌ಗಳನ್ನು ಗುರುವಾರದಿಂದ ಖರೀದಿ ಮಾಡಬಹುದು ಎಂದು ಆರ್‌ಸಿಬಿ ಹೇಳಿದೆ. ಏಪ್ರಿಲ್‌ 2 ರಂದು ಬೆಂಗಳೂರಿನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ವಿರುದ್ಧ ಆಡುವ ಮೂಲಕ ಆರ್‌ಸಿಬಿ ತನ್ನ ಅಭಿಯಾನವನ್ನು ಆರಂಭ ಮಾಡಲಿದೆ. ಇನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿರುವ ಎಲ್ಲಾ ಪಂದ್ಯಗಳ ಎಲ್ಲಾ ಟಿಕೆಟ್‌ಗಳು ಡೈನಾಮಿಕ್‌ ಪ್ರೈಸಿಂಗ್‌ನಲ್ಲಿ ಇರಲಿದೆ ಎಂದು ಆರ್‌ಸಿಬಿ ತಿಳಿಸಿದೆ.

WPL 2023: RCB ತಂಡಕ್ಕೆ ಧೈರ್ಯ ತುಂಬಿದ ವಿರಾಟ್ ಕೊಹ್ಲಿ..! ಗೆಲುವಿನ ಖಾತೆ ತೆರೆದ ಬೆಂಗಳೂರು

ಏನಿದು ಡೈನಾಮಿಕ್‌ ಪ್ರೈಸಿಂಗ್‌: ಆರ್‌ಸಿಬಿ ತಂಡದ ಎದುರಾಳಿ ಯಾರು, ಟಿಕೆಟ್‌ ಬುಕ್ಕಿಂಗ್‌ಗೆ ಇರುವ ಸಮಯ ಹಾಗೂ ಬೇಡಿಕೆಯ ಆಧಾರದ ಮೇಲೆ ಟಿಕೆಟ್‌ನ ಬೆಲೆ ಏರಿಕೆಯಾಗಲಿದೆ ಎಂದು ಆರ್‌ಸಿಬಿ ತಿಳಿಸಿದೆ. ಇದೇ ಮೊದಲ ಬಾರಿಗೆ ಡೈನಾಮಿಕ್‌ ಪ್ರೈಸಿಂಗ್‌ಅನ್ನು ಟಿಕೆಟ್‌ ಮಾರಾಟದಲ್ಲಿ ಅಳವಡಿಸಿಕೊಂಡಿದೆ. ಆರ್‌ಸಿಬಿ ತಂಡ ತನ್ನ ವೆಬ್‌ಸೈಟ್‌ (www.royalchallengers.com) ಮೂಲಕ ಕ್ರಿಕೆಟ್‌ ಅಭಿಮಾನಿಗಳು ಟಿಕೆಟ್‌ ಖರೀದಿ ಮಾಡಬಹುದು ಎಂದು ತಿಳಿಸಿದೆ.

WPL 2023 ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿಗೆ ಮೊದಲ ಗೆಲುವು, ಅಂಕಪಟ್ಟಿಯಲ್ಲಿ ಜಿಗಿತ!

ಮಾರ್ಚ್‌ 18 ರಿಂದ ಬಾಕ್ಸಾಫೀಸ್‌ ಸೇಲ್‌: ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ಆರಂಭವಾದ ಬೆನ್ನಲ್ಲಿಯೇ ಕಡಿಮೆ ಬೆಲೆಯ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ. ಇದರ ಬೆನ್ನಲ್ಲಿಯೇ ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಆರ್‌ಸಿಬಿ ತಂಡ ಮಾರ್ಚ್‌ 18 ರಿಂದ ಬಾಕ್ಸಾಫೀಸ್‌ ಟಿಕೆಟ್‌ ಮಾರಾಟ (ಗ್ಯಾಲರಿ ಟಿಕಟ್‌) ಆರಂಭವಾಗಲಿದೆ ಎಂದು ತಿಳಿಸಿದೆ. ಚಿನ್ನಸ್ವಾಮಿ ಸ್ಟೇಡಿಯನಲ್ಲಿ ಗೇಟ್‌ ನಂ.18 ಹಾಗೂ 19 ರಲ್ಲಿ ಬೆಳಗ್ಗೆ 10.30 ರಿಂದ ರಾತ್ರಿ 8.30ರವರೆಗೆ ಟಿಕೆಟ್‌ ಮಾರಾಟ ನಡೆಯಲಿದೆ. ಇದು ಕಡಿಮೆ ಬೆಲೆಯ ಟಿಕೆಟ್‌ಗಳಾಗಿದ್ದು, ಇದಕ್ಕೂ ಎಂದಿನಂತೆ ದೊಡ್ಡ ಮಟ್ಟದ ಬೇಡಿಕೆ ವ್ಯಕ್ತವಾಗುವ ಸಾಧ್ಯತೆ ಇದೆ.