World Cup 2023: ಕೊನೆಗೂ ಗೆಲುವಿನ ಖಾತೆ ತೆರೆದ ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ
ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಕೊನೆಗೂ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು.
ಲಕ್ನೋ (ಅ.16): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊನೆಗೂ ಆಸ್ಟ್ರೇಲಿಯಾ ತಂಡ ಗೆಲುವಿನ ಖಾತೆ ತೆರೆದಿದೆ. ಸೆಮಿಫೈನಲ್‌ಗೇರುವ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಐದು ಬಾರಿಯ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ಇನ್ನೊಂದೆಡೆ ಶ್ರೀಲಂಕಾ ತಂಡಕ್ಕೂ ಕೂಡ ಈ ಪಂದ್ಯ ಅನಿವಾರ್ಯವೆನಿಸಿತ್ತು. ಆದರೆ, ಬ್ಯಾಟಿಂಗ್‌ನಲ್ಲಿ ದಯನೀಯ ವೈಫಲ್ಯ ಕಂಡ ಶ್ರೀಲಂಕಾ ಪರವಾಗಿ ಏಳು ಮಂದಿ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತ ದಾಖಲಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು. ಆಡಂ ಜಂಪಾ (47ಕ್ಕೆ 4) ನೇತೃತ್ವದಲ್ಲಿ ಭರ್ಜರಿ ದಾಳಿ ಸಂಘಟಿಸಿದ ಆಸ್ಟ್ರೇಲಿಯಾ ತಂಡ ಶ್ರೀಲಂಕಾವನ್ನು 43.3 ಓವರ್‌ಗಳಲ್ಲಿ 209 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ ತನ್ನ ಅನುಭವಿ ಬ್ಯಾಟ್ಸ್‌ಮನ್‌ಗಳನ್ನು 24 ರನ್ ಬಾರಿಸುವ ವೇಳೆಗೆ ಕಳೆದುಕೊಂಡರೂ, ಜೋಶ್ ಇಂಗ್ಲಿಸ್ ಹಾಗೂ ಮಿಚೆಲ್ ಮಾರ್ಷ್ ಅರ್ಧಶತಕದ ನೆರವಿನಿಂದ 35.2 ಓವರ್‌ಗಳಲ್ಲಿ5 ವಿಕೆಟ್‌ಗೆ 215 ರನ್ ಬಾರಿಸಿ ಗೆಲುವು ಕಂಡಿತು.
ಸೋಮವಾರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಲು ವಿಫಲವಾಯಿತು. ಅದಕ್ಕಿಂತ ಹೆಚ್ಚಾಗಿ ಮೊದಲ ವಿಕೆಟ್‌ಗೆ 125 ರನ್‌ಗಳ ಉತ್ತಮ ಆರಂಭ ಸಿಕ್ಕರೂ ದೊಡ್ಡ ಮೊತ್ತ ಪೇರಿಸುವಲ್ಲಿ ತಂಡ ಹಿನ್ನಡೆ ಕಂಡಿತು. ಪಥುಮ್ ನಿಸ್ಸಾಂಕ (61 ರನ್, 67 ಎಸೆತ, 8 ಬೌಂಡರಿ) ಹಾಗೂ ಕುಸಲ್ ಪೆರೇರಾ (78ರನ್, 82 ಎಸೆತ, 12 ಬೌಂಡರಿ) ಮೊದಲ ವಿಕೆಟ್‌ಗೆ 125 ರನ್ ಬಾರಿಸಿದ್ದರು. ಈ ಹಂತದಲ್ಲ ಶ್ರೀಲಂಕಾ ತಂಡ ದೊಡ್ಡ ಮೊತ್ತ ಪೇರಿಸುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ, ಈ ಜೊತೆಯಾಟವನ್ನು ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೇರ್ಪಡಿಸಿದ್ದೇ ಶ್ರೀಲಂಕಾದ ಪತನ ಆರಂಭವಾಯಿತು.
ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 125 ರನ್ ಬಾರಿಸಿದ್ದ ಶ್ರೀಲಂಕಾ ತಂಡ ನಂತರ 84 ರನ್‌ಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಮೊತ್ತ 157ರನ್ ಆಗಿದ್ದಾಗ ಕುಸಲ್ ಪೆರೇರಾ ಕೂಡ ಔಟಾದರೆ, ನಂತರ ಬಂದ ಬ್ಯಾಟ್ಸ್‌ಮನ್‌ಗಳ ಪೈಕಿ ಚರಿತ್ ಅಸಲಂಕ(25) ಮಾತ್ರವೇ ಎರಡಂಕಿ ಮೊತ್ತ ದಾಖಲಿಸಿದರು. ಆಸೀಸ್ ಪರವಾಗಿ ಭರ್ಜರಿ ದಾಳಿ ಸಂಘಟಿಸಿದ ಸ್ಪಿನ್ನರ್ ಆಡಂ ಜಂಪಾ 4 ವಿಕೆಟ್ ಉರುಳಿಸಿ ಮಿಂಚಿದರು.
ಚೇಸಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ನಾಲ್ಕನೇ ಓವರ್‌ನಲ್ಲಿಯೇ ಡೇವಿಡ್ ವಾರ್ನರ್ (11) ಹಾಗೂ ಅದೇ ಓವರ್‌ನ ಕೊನೇ ಎಸೆತದಲ್ಲಿ ಸ್ಟೀವನ್ ಸ್ಮಿತ್ (0) ವಿಕೆಟ್ ಕಳೆದುಕೊಂಡಿತು. 24 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಆಸೀಸ್ ತಂಡಕ್ಕೆ ಮೂರನೇ ವಿಕೆಟ್‌ಗೆ ಮಿಚೆಲ್ ಮಾರ್ಷ್ (52 ರನ್, 51 ಎಸೆತ, 9 ಬೌಂಡರಿ) ಹಾಗೂ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ (58 ರನ್, 59 ಎಸೆತ, 5 ಬೌಂಡರಿ, 1 ಸಿಕ್ಸರ್) ಆಕರ್ಷಕ ಜೊತೆಯಾಟವಾಡಿ ತಂಡದ ಮೊತ್ತವನ್ನು 81ಕ್ಕೆ ಏರಿಸಿದರು. ಈ ವೇಳೆ ಮಿಚೆಲ್ ಮಾರ್ಷ್ ಔಟಾದರೆ, ನಂತರ ಬಂದ ಮಾರ್ನಸ್ ಲಬುಶೇನ್ (40ರನ್, 60 ಎಸೆತ, 2 ಬೌಂಡರಿ) ತಂಡದ ಬ್ಯಾಟಿಂಗ್‌ಅನ್ನು ಆಧರಿಸಿ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು.
ಕೆಎಲ್ ರಾಹುಲ್‌ಗೆ ಗೋಲ್ಡ್ ಮೆಡಲ್, ಭರ್ಜರಿಯಾಗಿ ಕಿಚಾಯಿಸಿದ ಟೀಮ್!
ಈ ವೇಳೆಗಾಗಲೇ ಆಸೀಸ್ ತಂಡ ಗೆಲುವು ಕಾಣುವುದು ಖಚಿತವಾಗಿತ್ತು. ಲಬುಶೇನ್ ಹಾಗೂ ಜೋಸ್ ಇಂಗ್ಲಿಸ್ ತಂಡವನ್ನು ಗೆಲುವಿನ ದಡ ಸೇರಿಸುವ ಮುನ್ನವೇ ಔಟಾದರೂ, ಅನುಭವಿ ಬ್ಯಾಟ್ಸ್‌ಮನ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ (31 ರನ್, 21 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಮಾರ್ಕಸ್ ಸ್ಟೋಯಿನಿಸ್ (20 ರನ್, 10 ಎಸೆತ, 2 ಬೌಂಡರಿ, 1 ಸಿಕ್ಸರ್) ಅಬ್ಬರದ ಆಟವಾಡಿ ಇನ್ನೂ ಅಂದಾಜು 15 ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಹಿಂದೆ ವಿರಾಟ್ ಕೊಹ್ಲಿ, ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ LALOG!