ವಂಚನೆ ಆರೋಪದಡಿ ಜೈಲು ಸೇರಿದ್ದ ಬೆಂಗಾಲ್ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ರಣಜಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ 149 ರನ್ ಗಳಿಸಿದ ಅವರು, ಮೈದಾನದಲ್ಲೇ ಭಾವುಕರಾಗಿ ಕಣ್ಣೀರಿಟ್ಟರು. ತಮ್ಮ ಮೇಲಿನ ಆರೋಪಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸುವುದಾಗಿ ಅವರು ತಿಳಿಸಿದ್ದಾರೆ.
ಅಪ್ತ ಗೆಳತಿ ನೀಡಿದ ದೂರಿನ ಮೇರೆ ಜೈಲು ಸೇರಿದ್ದ ಬೆಂಗಾಲ್ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್, ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ. ಪ್ರತಿಷ್ಠಿತ ದೇಶೀಯ ಕ್ರಿಕೆಟ್ ಟೂರ್ನಿಯಾಗಿರುವ 2026-27ನೇ ಆವೃತ್ತಿಯಲ್ಲಿ ರಣಜಿ ಪಂದ್ಯದಲ್ಲಿ ಬಂಗಾಳ ತಂಡ ದೆಹಲಿಯನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಅಭಿಷೇಕ್ ಪೊರೆಲ್ ಶತಕ ಗಳಿಸಿದ್ದಾರೆ. ಅಲ್ಲದೇ ಶತಕ ಸಂಭ್ರಮಾಚರಣೆ ನಡುವೆ ಎದುರಾಗಿದ್ದ ಕಷ್ಟಗಳನ್ನು ನೆನೆದು ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ. ತನ್ನ ವಿರುದ್ಧ ಎದುರಾದ ಆರೋಪಗಳಿಗೆ ಬ್ಯಾಟ್ ಮೂಲಕ ಅಭಿಷೇಕ್ ಉತ್ತರಿಸಿದ್ದಾರೆ.
23 ವರ್ಷದ ಅಭಿಷೇಕ್ ಪೊರೆಲ್, ಮೊದಲ ಇನ್ನಿಂಗ್ಸ್‌ನಲ್ಲಿ 149 ಎಸೆತಗಳಲ್ಲಿ17 ಬೌಂಡರಿ, ಸಿಕ್ಸರ್‌ನೊಂದಿಗೆ 149 ರನ್ ಗಳಿಸಿ ಕಮ್ ಬ್ಯಾಕ್ ಮಾಡಿದ್ದಾರೆ. ಅಭಿಷೇಕ್ ಅವರ ಭರ್ಜರಿ ಶತಕದ ನೆರವಿನಿಂದ ಪಂದ್ಯದಲ್ಲಿ ಬೆಂಗಾಲ್ ಮೊದಲ ಇನ್ನಿಂಗ್ಸ್‌ನಲ್ಲಿ 112 ಓವರ್‌ಗಳಲ್ಲಿ 429 ರನ್ ಗಳಿಗೆ ಅಲೌಟ್ ಆಗಿದೆ. ಇದರೊಂದಿಗೆ ಬೆಂಗಾಲ್ ತಂಡಕ್ಕೆ 189 ರನ್ ಗಳ ಮುನ್ನಡೆ ಸಿಕ್ಕಿದೆ.
ಶತಕದ ಬಳಿಕ ಕಣ್ಣೀರಿಟ್ಟ ಅಭಿಷೇಕ್ ಪೊರೆಲ್
ಅಭಿಷೇಕ್ ಪೊರೆಲ್ ಅವರ ವೃತ್ತಿ ಜೀವನದಲ್ಲಿ ಇದು ಎರಡನೇ ಫಸ್ಟ್ ಕ್ಲಾಸ್ ಶತಕ ಆಗಿದೆ. ಶತಕ ಸಿಡಿಸಿದ ಬಳಿಕ ಮೈದಾನದಲ್ಲೇ ಭಾವುಕರಾಗಿ ಕುಸಿದು ಬಿದ್ದು ಕಣ್ಣೀರಿಟ್ಟಿದ್ದಾರೆ. ಆ ಬಳಿಕ ಎದ್ದು ಬ್ಯಾಟ್ ಮೇಲೆತ್ತಿ ಸಂಭ್ರಮಾಚರಣೆ ಮಾಡಿದ್ದಾರೆ. ಅಭಿಷೇಕ್ ಅವರ ಕಣ್ಣೀರು ಸ್ಥಳದಲ್ಲಿದ್ದ ಇತರರ ಆಟಗಾರರ ಕಣ್ಣೀನಲ್ಲೂ ನೀರು ಜಿನಿಗಿತ್ತು.
ಎರಡನೇ ದಿನದಾಟದ ಬಳಿಕ ಮಾತನಾಡಿದ ಪೊರೆಲ್, ಶತಕ ಬಳಿಕ ಬಹಳ ಭಾವುಕನಾಗಿದ್ದೆ. ನಾನು ಬ್ಯಾಟ್ ಮೂಲಕವೇ ಎಲ್ಲರಿಗೂ ಉತ್ತರಿಸಲು ಪಂದ್ಯಕ್ಕೂ ಮುನ್ನ ನಿರ್ಧಾರ ಮಾಡಿದ್ದೆ. ಆದ್ದರಿಂದಲೇ ಸ್ವಲ್ಪ ಭಾವುಕನಾಗಿದ್ದೆ. ಸಂಕಷ್ಟದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಕೋಚ್ ಹಾಗೂ ಬೆಂಗಾಲ್ ಕ್ರಿಕೆಟ್ ಬೋರ್ಡ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮದುವೆ ಹೆಸರಿನಲ್ಲಿ ವಂಚನೆ ಆರೋಪ
ಕೆಲವು ದಿನಗಳ ಹಿಂದಷ್ಟೇ ಅಭಿಷೇಕ್ ಪೊರೆಲ್ ವಿರುದ್ಧ ಆತನ ಗೆಳತಿಯೇ ದೂರು ದಾಖಲಿಸಿದ್ದಳು. ಕರ್ನಾಟಕ ಮೂಲಕದ ವಿದ್ಯಾರ್ಥಿನಿ, ತನಗೆ ಮದುವೆ ಮಾಡಿಕೊಳ್ಳುವ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಇದರೊಂದಿಗೆ ಪ್ರಕರಣ ದಾಖಲಿಸಿದ ಪೊಲೀಸರು, ಪೊರೆಲ್‌ರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ಪೊರೆಲ್ ಸದ್ಯ ಕೊರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ಅಭಿಷೇಕ್ ಪೊರೆಲ್ ತಿರಸ್ಕರಿಸಿದ್ದಾರೆ. ಜಾಮೀನು ಪಡೆದು ಹೊರಬಂದ ಆಟಗಾರನ ಬೆಂಬಲಕ್ಕೆ ನಿಂತ ಕ್ರಿಕೆಟ್ ಬೋರ್ಡ್ ಆತನಿಗೆ ಆಡಲು ಅವಕಾಶ ಕೂಡ ನೀಡಿತ್ತು. ರಣಜಿ ಟ್ರೋಫಿಯ ಆರಂಭದ ಪಂದ್ಯದಲ್ಲಿ ಪೊರೆಲ್ ಆಡುವ ಅವಕಾಶ ಸಿಕ್ಕಿತ್ತು. ಇನ್ನು ಈ ಕುರಿತಂತೆ ಸ್ಪಷ್ಟನೆ ನೀಡಿರುವ ಕ್ರಿಕೆಟ್ ಬೋರ್ಡ್, ಆಟಗಾರನ ವೈಯುಕ್ತಿಕ ಹಾಗೂ ನ್ಯಾಯಾಲಯದಲ್ಲಿರುವ ವಿಚಾರಗಳಿಗೂ ನಮಗೂ ಯಾವುದೇ ಸಂಬಂಧ ಇಲ್ಲ, ಆದ್ದರಿಂದಲೇ ಆತನನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪರಿಗಣಿಸಲಾಗಿದೆ ಎಂದು ಸ್ಪಷ್ಟಪಡಿಸಿತ್ತು.


