ಐದನೇ ಟೆಸ್ಟ್‌ನಲ್ಲಿ ಗೆಲ್ಲಲು ಇಂಗ್ಲೆಂಡಿಗೆ 35 ರನ್‌ಗಳ ಅಗತ್ಯವಿದ್ದು, ಭಾರತಕ್ಕೆ 4 ವಿಕೆಟ್‌ಗಳ ಅಗತ್ಯವಿದೆ. ಮಳೆಯಿಂದಾಗಿ ಪಂದ್ಯವು ಐದನೇ ದಿನಕ್ಕೆ ಮುಂದುವರೆದಿದ್ದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಫಲಿತಾಂಶ ಅತಂತ್ರವಾಗಿದೆ.
ಲಂಡನ್: ಎರಡೂವರೆ ಗಂಟೆ ಸಿನಿಮಾವೊಂದು ಇನ್ನೇನು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಾಗ ಥಿಯೇಟರ್‌ನಲ್ಲಿ ಕರೆಂಟ್ ಹೋದಾಗ ಪರಿಸ್ಥಿತಿ ಹೇಗಿರುತ್ತದೆಯೋ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ತೆಂಡುಲ್ಕರ್-ಆ್ಯಂಡರ್‌ಸನ್ ಸರಣಿಯ ಕಥೆಯೂ ಅದೇ ರೀತಿ ಆಗಿದೆ. ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಕ್ಲೈಮ್ಯಾಕ್ಸ್ ಅಷ್ಟೇ ಉಳಿದುಕೊಂಡಿದೆ.
4ನೇ ದಿನವೇ ಮುಗಿಯಬೇಕಿದ್ದ ಪಂದ್ಯವನ್ನು ಮಳೆರಾಯ 5ನೇ ದಿನಕ್ಕೆ ಮುಂದೂಡಿದ್ದಾನೆ. ಇದರೊಂದಿಗೆ ಸರಣಿಯ ಐದೂ ಪಂದ್ಯಗಳು 5ನೇ ದಿನ ಕಂಡಂತಾಗುತ್ತದೆ. ಗೆಲ್ಲಲು 374 ರನ್‌ಗಳ ಬೃಹತ್ ಗುರಿ ಬೆನ್ನತ್ತಿರುವ ಇಂಗ್ಲೆಂಡ್, 3ನೇ ದಿನಕ್ಕೆ 1 ವಿಕೆಟ್‌ಗೆ 50 ರನ್ ಗಳಿಸಿತ್ತು. ಭಾನುವಾರ ಮೊದಲ ಅವಧಿಯಲ್ಲೇ ಭಾರತ ಮೇಲುಗೈ ಸಾಧಿಸಿದರೂ, ಹ್ಯಾರಿ ಬ್ರೂಕ್ ಹಾಗೂ ಜೋ ರೂಟ್‌ರ ‘ಬಾಜ್‌ಬಾಲ್’ ಆಟದ ಪರಿಣಾಮ ಇಂಗ್ಲೆಂಡ್ ಸುಲಭ ಗೆಲುವು ಸಾಧಿಸಲಿದೆ ಎನ್ನುವ ನಿರೀಕ್ಷೆ ಮೂಡಿತು. ಆದರೆ, ಚಹಾ ವಿರಾಮದ ಬಳಿಕ ಭಾರತೀಯ ವೇಗಿಗಳಿಗೆ ತಮ್ಮೆಲ್ಲಾ ಬಲ ಪ್ರಯೋಗಿಸಿ ಇಂಗ್ಲೆಂಡನ್ನು ಕಟ್ಟಿಹಾಕಲು ಪ್ರಯತ್ನಿಸಿದರು. ಈ ಪ್ರಯತ್ನ ಯಶಸ್ಸನ್ನೂ ನೀಡಿತು. ಶತಕ ವೀರ ರೂಟ್ ಹಾಗೂ ಅಪಾಯಕಾರಿ ಜೇಕಬ್ ಬೆಥೆಲ್ ಔಟಾದರು. ತಂಡದ ಗೆಲುವಿಗೆ ಇನ್ನು 35 ರನ್ ಬೇಕಿದ್ದಾಗ, ಮಳೆ ಆರಂಭಗೊಂಡಿದ್ದರಿಂದ ದಿನದಾಟವನ್ನು ಕೊನೆಗೊಳಿಸಲಾಯಿತು.
4ನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿರುವ ಇಂಗ್ಲೆಂಡ್, ಸೋಮವಾರ ಗೆಲ್ಲಬೇಕಿದ್ದರೆ 35 ರನ್ ಗಳಿಸಬೇಕಿದೆ. ಭಾರತಕ್ಕೆ 4 ವಿಕೆಟ್‌ನ ಅಗತ್ಯವಿದೆ. ಭುಜದ ಗಾಯದಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡದ ಕ್ರಿಸ್ ವೋಕ್ಸ್, ಭಾನುವಾರ ತಮ್ಮ ತಂಡ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿಯಲು ಸಿದ್ಧತೆ ನಡೆಸುತ್ತಿದ್ದ ದೃಶ್ಯಗಳು ಟೀವಿಯಲ್ಲಿ ಪ್ರಸಾರಗೊಂಡಿತು. ಅಗತ್ಯಬಿದ್ದರೆ ವೋಕ್ಸ್ ಬ್ಯಾಟಿಂಗ್‌ಗಿಳಿಯುವುದು ಖಚಿತ. ಹೀಗಾಗಿ, ಭಾರತ ಪಂದ್ಯ ಗೆದ್ದು ಸರಣಿ ಡ್ರಾ ಮಾಡಿಕೊಳ್ಳಬೇಕಿದ್ದರೆ ಕೊನೆ 4 ವಿಕೆಟ್ ಉರುಳಿಸಬೇಕು.
ಆರಂಭಿಕ ಯಶಸ್ಸು: ದಿನದಾಟದ ಮೊದಲ ಅವಧಿಯಲ್ಲಿ ಡಕೆಟ್ ಹಾಗೂ ಓಲಿ ಪೋಪ್‌ರ ವಿಕೆಟ್ ಕಬಳಿಸಲು ಭಾರತ ಯಶಸ್ವಿಯಾಯಿತು. 54 ರನ್ ಗಳಿಸಿದ ಡಕೆಟ್‌ರನ್ನು ಪ್ರಸಿದ್ಧ್ ಬಲಿ ಪಡೆದರೆ, ಪೋಪ್ 27 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು.
ಸ್ಫೋಟಕ ಆಟ: ಭೋಜನ ವಿರಾಮಕ್ಕೆ ಕೆಲ ನಿಮಿಷ ಬಾಕಿ ಇರುವಾಗ ಬ್ರೂಕ್ ಸ್ಫೋಟಕ ಆಟ ಆರಂಭಿಸಿದರು. 19 ರನ್ ಗಳಿಸಿದ್ದಾಗ ಪ್ರಸಿದ್ಧ್‌ರ ಬೌಲಿಂಗ್‌ನಲ್ಲಿ ಬ್ರೂಕ್ ಬಾರಿಸಿದ ಚೆಂಡು ಮಿಡ್ ವಿಕೆಟ್‌ನ ಬೌಂಡರಿ ಗೆರೆ ಬಳಿ ಇದ್ದ ಸಿರಾಜ್‌ರ ಕೈ ಸೇರಿತು. ಆದರೆ ಸಿರಾಜ್ ಗೆರೆ ತುಳಿದ ಕಾರಣ, ಬ್ರೂಕ್‌ಗೆ ಜೀವದಾನ ಸಿಕ್ಕಿತು. ಆ ಬಳಿಕ ಭಾರತೀಯರನ್ನು ಬೆಂಡೆತ್ತಿದ ಬ್ರೂಕ್ 91 ಎಸೆತದಲ್ಲಿ ಶತಕ ಪೂರೈಸಿದರು. 98 ಎಸೆತದಲ್ಲಿ 111 ರನ್ ಗಳಿಸಿ ಬ್ರೂಕ್ ಔಟಾದ ಬಳಿಕ, ರೂಟ್ ಸರಣಿಯಲ್ಲಿ 3ನೇ ಶತಕ ದಾಖಲಿಸಿ ತಂಡವನ್ನು ಜಯದತ್ತ ಕೊಂಡೊಯ್ಯುವ ಭರವಸೆ ಮೂಡಿಸಿದರು.
105 ರನ್ ಗಳಿಸಿದ ರೂಟ್, 5 ರನ್ ಗಳಿಸಿದ ಬೆಥೆಲ್‌ರನ್ನು ಪ್ರಸಿದ್ಧ್ ಪೆವಿಲಿಯನ್‌ಗೆ ಕಳುಹಿಸುತ್ತಿದ್ದಂತೆ ಭಾರತೀಯರಲ್ಲಿ ಜಯದ ಆಸೆ ಮತ್ತೆ ಚಿಗುರಿತು. ಸಿರಾಜ್, ಪ್ರಸಿದ್ಧ್ ಅತ್ಯುತ್ತಮ ದಾಳಿ ಸಂಘಟಿಸಿದರು. ರೂಟ್ ಔಟಾದ ಬಳಿಕ ಇಂಗ್ಲೆಂಡ್ 3.4 ಓವರಲ್ಲಿ ಕೇವಲ 2 ರನ್ ಗಳಿಸಿತು. ಆಟದ ರೋಚಕತೆ ಹೆಚ್ಚುತ್ತಿದ್ದಾಗ ಮಳೆ ಆಗಮನವಾಗಿ, ದಿನದಾಟಕ್ಕೆ ತೆರೆ ಬಿತ್ತು. ಜೇಮಿ ಸ್ಮಿತ್ ಹಾಗೂ ಜೇಮಿ ಓವರ್‌ಟನ್ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪ್ರಸಿದ್ಧ್ 3, ಸಿರಾಜ್ 2, ಆಕಾಶ್‌ದೀಪ್ 1 ವಿಕೆಟ್ ಕಬಳಿಸಿದ್ದು, ಕೊನೆ ದಿನ ಇಂಗ್ಲೆಂಡನ್ನು ಬೇಗನೆ ಆಲೌಟ್ ಮಾಡಿ ಭಾರತ ಸರಣಿ ಡ್ರಾ ಮಾಡಿಕೊಳ್ಳಲು ನೆರವಾಗುವ ವಿಶ್ವಾಸದಲ್ಲಿದ್ದಾರೆ.


