ಬೆಂಗಳೂರು(ಫೆ.07): 1999ರ ಫೆಬ್ರವರಿ 7 ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಪಾಲಿಗೆ ಎಂದೆಂದಿಗೂ ಮರೆಯಲಾಗದ ದಿನ. ಕುಂಬ್ಳೆ ಮಾತ್ರವಲ್ಲ ವಿಶ್ವ ಕ್ರಿಕೆಟ್‌ ಪಾಲಿಗೆ ಅದು ಚಾರಿತ್ರಿಕ ದಿನ. ಆ ದಿನ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಫಿರೋಜ್‌ ಶಾ ಕೋಟ್ಲಾ(ಈಗ ಅರುಣ್ ಜೇಟ್ಲಿ ಮೈದಾನ)ದಲ್ಲಿ ನಡೆದ ಟೆಸ್ಟ್ ಪಂದ್ಯದ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆ ಸರಿಗಟ್ಟಿದ್ದರು.  ಆ ಐತಿಹಾಸಿಕ ದಿನಕ್ಕೆ ಇಂದಿಗೆ 21 ವರ್ಷಗಳು ಸಂದಿವೆ.

ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕುಂಬ್ಳೆ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಬೌಲರ್ ಎನ್ನುವ ವಿಶ್ವದಾಖಲೆ ಬರೆದಿದ್ದರು. ಈ ಮೊದಲು ಇಂಗ್ಲೆಂಡ್‌ನ ಜಿಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದರು.

ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಮಾಜಿ ನಾಯಕ ಅನಿಲ್ ಕುಂಬ್ಳೆ!

ಭಾರತ ತಂಡವು ಚೆನ್ನೈನಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 12 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಹೀಗಾಗಿ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 252 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 172 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಭಾರತ ಆರಂಭಿಕ ಬ್ಯಾಟ್ಸ್‌ಮನ್ ಶೆಡಗೊಪ್ಪನ್ ರಮೇಶ್(96) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ 339 ರನ್ ಕಲೆ ಹಾಕಿತು. ಈ ಮೂಲಕ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 420 ರನ್‌ಗಳ ಗುರಿ ನೀಡಿತು.

ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಶಾಹಿದ್ ಅಫ್ರಿದಿ ಹಾಗೂ ಸಯೀದ್ ಅನ್ವರ್ ಶತಕದ ಜತೆಯಾಟ ಆಡುವ ಮೂಲಕ ಒತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 101 ರನ್‌ಗಳ ಜತೆಯಾಟ ನಿಭಾಯಿತು. 25ನೇ ಓವರ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸಲು(ಅಫ್ರಿದಿ 41)ಕುಂಬ್ಳೆ ಯಶಸ್ವಿಯಾದರು. ಆ ಬಳಿಕ ಕುಂಬ್ಳೆ ಅಕ್ಷರಶಃ ಮ್ಯಾಜಿಕ್ ಮಾಡಿದರು. ಕೇವಲ 27 ರನ್‌ಗಳ ಅಂತರದಲ್ಲಿ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡಿತು. ವಾಸೀಂ ಅಕ್ರಂ ವಿಕೆಟ್ ಕಬಳಿಸುವ ಮೂಲಕ ಜಂಬೋ ಎಲ್ಲಾ 10 ವಿಕೆಟ್ ಪಡೆದು ಕುಣಿದು ಕುಪ್ಪಳಿಸಿದರು. 

ಎಂದೆಂದಿಗೂ ನೀ ಕನ್ನಡವಾಗಿರು; ಸವಾಲು ಸ್ವೀಕರಿಸಿ ಕುವೆಂಪು ಕವನ ಓದಿದ ಕುಂಬ್ಳೆ!

ಅನಿಲ್ ಕುಂಬ್ಳೆ 26.3 ಓವರ್ ಬೌಲಿಂಗ್ ಮಾಡಿ ಕೇವಲ 74 ರನ್ ನೀಡಿ 10 ವಿಕೆಟ್ ಕಬಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 212 ರನ್‌ಗಳ ಐತಿಹಾಸಿಕ ಜಯ ದಾಖಲಿಸುವ ಮೂಲಕ ಸರಣಿ ಸಮಬಲ ಮಾಡಿಕೊಂಡಿತು.

ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಭಾರತ ಪರ 132 ಟೆಸ್ಟ್ ಪಂದ್ಯಗಳನ್ನಾಡಿ 619 ವಿಕೆಟ್ ಕಬಳಿಸಿದ್ದಾರೆ. ಭಾರತಕ್ಕೆ ಏಕಾಂಗಿಯಾಗಿ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟಿದ್ದ ಕುಂಬ್ಳೆ 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಮೂರನೇ ಸ್ಥಾನದಲ್ಲಿದ್ದು, ಲಂಕಾ ಮಾಂತ್ರಿಕ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್(800) ಹಾಗೂ ಆಸೀಸ್ ದಿಗ್ಗಜ ಲೆಗ್ ಸ್ಪಿನ್ನರ್ ಶೇನ್ ವಾರ್ನ್(708) ಮೊದಲೆರಡು ಸ್ಥಾನದಲ್ಲಿದ್ದಾರೆ. 
 

ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ