WCL ಟೂರ್ನಿ ಬಿಡುವಿನ ವೇಳೆ ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಟವಾಡುವಾಗ ನನ್ನ ಮಗನ ನೆನಪಾಯಿು. ಮಗ ನನ್ನ ಜೊತೆಗಿದ್ದರೆ ಆ ಖುಷಿಯೇ ಬೇರೆ ಇತ್ತು. ಆದರೆ..ಶಿಖರ್ ಧವನ್ ತನ್ನ ಮಗನ ನೆನೆದು ಭಾವುಕರಾಗಿದ್ದಾರೆ. ಮಗನ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ.
ನವದೆಹಲಿ (ಆ.08) ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ ಕ್ರಿಕೆಟ್ ಟೂರ್ನಿ ಇತ್ತೀಚೆಗೆ ಮುಕ್ತಾಯಗೊಂಡಿದೆ. ಹಿರಿಯ ಕ್ರಿಕೆಟಿಗರ ಈ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನ ವಿರುದ್ದ ಮುಖಾಮುಖಿ ನಿರಾಕರಿಸಿ ಟೂರ್ನಿಯಿಂದ ಹೊರನಡೆದಿತ್ತು. ಯುವರಾಜ್ ಸಿಂಗ್ ನೇತೃತ್ವದ ಟೀಂ ಇಂಡಿಯಾದಲ್ಲಿ ಶಿಖರ್ ಧವನ್ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆದರೆ ಟೂರ್ನಿ ಬಳಿಕ ಶಿಖರ್ ಧವನ್ ಭಾವುಕರಾಗಿದ್ದಾರೆ. ತಮ್ಮ ಮಗ ಝೊರಾವರ್ ನೆನೆದು ಶಿಖರ್ ಧವನ್ ಭಾವುಕರಾಗಿದ್ದಾರೆ. ಮಗನ ಕುರಿತು ಭಾವುಕರಾಗಿ ಮಾತುಗನ್ನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಗನ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದಾರೆ. ಶಿಖರ್ ಧವನ್ ಮಾತುಗಳು ಹಲವರನ್ನು ಭಾವುಕರನ್ನಾಗಿಸಿದೆ.
ಮಗನ ನೆನೆದು ಭಾವುಕ
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ ಟೂರ್ನಿ ನಿವೃತ್ತಿ ಹೊಂದಿದ ಕ್ರಿಕೆಟಿಗರ ಟೂರ್ನಿಯಾಗಿತ್ತು. ಕ್ರಿಕೆಟಿಗರು ತಮ್ಮ ಕುಟುಂಬ, ಮಕ್ಕಳ ಜೊತೆ ಪ್ರವಾಸ ಮಾಡಿದ್ದರು. ತಂದೆಯ ಬ್ಯಾಟಿಂಗ್, ಬೌಲಿಂಗ್‌ನ್ನು ಕ್ರಿಕೆಟಿಗರ ಮಕ್ಕಳು ಗ್ಯಾಲರಿಯಲ್ಲಿ ಕುಳಿತು ಆನಂದಿಸಿದ್ದರು. ಇತ್ತ ಟೂರ್ನಿಯ ವಿರಾಮದ ವೇಳೆಯಲ್ಲಿ ಕ್ರಿಕೆಟಿಗರು ತಮ್ಮ ಮಕ್ಕಳ ಜೊತೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಈ ವೇಳೆ ಶಿಖರ್ ಧವನ್ ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಇದೀಗ ತವರಿಗೆ ವಾಪಾಸ್ಸಾಗಿರುವ ಶಿಖರ್ ಧವನ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಗೆಳೆಯರು ತಮ್ಮ ಮಕ್ಕಳ ಜೊತೆ ಆಟವಾಡುವಾಗ ಮಗನ ನೆನಪು
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ ಟೂರ್ನಿಯಲ್ಲಿ ನನ್ನ ಗೆಳೆಯರು ತಮ್ಮ ತಮ್ಮ ಮಕ್ಕಳ ಜೊತೆ ಆಡವಾಡುವುದನ್ನು ನೋಡಿದೆ. ಅವಾಗ ನನಗೂ ಅನಿಸಿತ್ತು, ಈ ಸಂದರ್ಭದಲ್ಲಿ ಝೋರಾವರ್ ಇರಬೇಕಿತ್ತು ಎಂದು. ಆತನಿದ್ದರೆ ನಾನು ಬೇರೆಯೆ ವ್ಯಕ್ತಿಯಾಗುತ್ತಿದ್ದೆ. ನನ್ನ ಖುಷಿ ಬೇರೆ ಇರುತ್ತಿತ್ತು. ಆದರೆ ನನ್ನಲ್ಲಿರುವ ಕೆಲ ಫೋಟೋ ನೋಡಿ ಆತನ ಬಾಲ್ಯದ ಹಲವು ನೆನಪುಗಳು ಮರುಕಳಿಸಿತು.ಈ ಪೈಕಿ ಕೆಲ ಸಂದರ್ಭಗಳು ನನ್ನ ಹೃದಯಕ್ಕೆ ಮನಸ್ಸಿಗೆ ಅತೀವ ಹತ್ತಿರವಾದ ಘಟನೆಗಳು ಎಂದು ಶಿಖರ್ ಧವನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2023ರಲ್ಲಿ ಧವನ್ -ಆಯೇಷ ವಿಚ್ಚೇದನ
ಆಯೇಷ ಮುಖರ್ಜಿ ಮದುವೆಯಾಗಿದ್ದ ಶಿಖರ್ ಧವನ್ 2023ರಲ್ಲಿ ಡಿವೋರ್ಸ್ ಪಡೆದಿದ್ದರು. ಶಿಖರ್ ಧವನ್‌ಗೆ ಮಾನಸಿಕ, ಆರ್ಥಿಕ ಕಿರುಕುಳ ನೀಡುತ್ತಿದ್ದ ಆಯೇಷ ಮುಖರ್ಜಿಯಿಂದ ಬೇರೆ ದಾರಿ ಕಾಣದೆ ಧವನ್ ವಿಚ್ಚೇದನ ಪಡೆದಿದ್ದರು. ಧವನ್ ಪುತ್ರನನ್ನು ಭೇಟಿ ಮಾಡಲು ಆಯೇಷ ಅವಕಾಶ ನೀಡುತ್ತಿರಲಿಲ್ಲ. ಈ ಕುರಿತು ಕೋರ್ಟ್ ಸೂಚನೆ ನೀಡಿದ್ದರು. ಈಗಲೂ ಝೋರಾವರ್ ಭೇಟಿಗೆ ಆಯೇಷ ಅವಕಾಶ ನೀಡುತ್ತಿಲ್ಲ. ಆಯೇಷ ಮುಖರ್ಜಿ, ಝೋರಾವರ್ ಹಾಗೂ ಆಕೆಯ ಮೊದಲ ಪತಿಯ ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ. ಝೋರಾವರ್ ಮೇಲೆ ಧವನ್‌ಗೆ ಎಲ್ಲಿಲ್ಲದ ಪ್ರೀತಿ. ಆದರೆ ಮಗನ ಭೇಟಿ ಮಾಡುವ ಅವಕಾಶವೂ ಧವನ್‌ಗೆ ಸಿಗುತ್ತಿಲ್ಲ. ಇದರ ನಡುವೆ ಧವನ್ ಹಲವು ಬಾರಿ ಝೋರಾವರ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಇದೀಗ ಮತ್ತ ಭಾವುಕರಾಗಿ ಧವನ್ ಕೆಲ ಮಾತುಗಳನ್ನಾಡಿದ್ದಾರೆ. ಇದು ಇತರರ ಹೃದಯವನ್ನು ಭಾರವಾಗಿಸಿದೆ.
