ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಎಡಗೈ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ತಂಡ ಕೂಡಿಕೊಂಡಿದ್ದಾರೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮೆಲ್ಬರ್ನ್‌(ಜ.02): ತಮಿಳುನಾಡು ವೇಗಿ ತಂಗರಸು ನಟರಾಜನ್‌ಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಿದೆ. ಗಾಯಾಳು ಉಮೇಶ್‌ ಯಾದವ್‌ ಬದಲಿಗೆ ಎಡಗೈ ವೇಗಿ ನಟರಾಜನ್‌ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದು, 3ನೇ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಇದೆ. 

ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿ ನೆಟ್‌ ಬೌಲರ್‌ ಆಗಿ ಆಸ್ಪ್ರೇಲಿಯಾಗೆ ತೆರಳಿದ ನಟರಾಜನ್‌, ಮೊದಲು ಏಕದಿನ ತಂಡಕ್ಕೆ ಸೇರ್ಪಡೆಗೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಗಾಯಗೊಂಡಿದ್ದರಿಂದ ಟಿ20 ತಂಡದಲ್ಲಿ ಸ್ಥಾನ ದೊರೆಯಿತು. ಭಾರತ ಟಿ20 ತಂಡಕ್ಕೂ ಕಾಲಿಟ್ಟು ಉತ್ತಮ ಪ್ರದರ್ಶನ ತೋರಿದರು. ಇದೀಗ ಟೆಸ್ಟ್‌ ತಂಡಕ್ಕೂ ಸೇರ್ಪಡೆಗೊಂಡಿದ್ದು, ಪಾದಾರ್ಪಣೆ ಮಾಡುವ ಉತ್ಸಾಹದಲ್ಲಿದ್ದಾರೆ.

ಸಿಡ್ನಿ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 3 ಬದಲಾವಣೆ..?

ಜನವರಿ 5ಕ್ಕೆ ಸಿಡ್ನಿಗೆ ಭಾರತ

2ನೇ ಟೆಸ್ಟ್‌ ಮುಕ್ತಾಯದ ಬಳಿಕ ಮೆಲ್ಬರ್ನ್‌ನಲ್ಲೇ ಅಭ್ಯಾಸ ಮುಂದುವರಿಸಿರುವ ಭಾರತ ತಂಡ, ಜ.5ರಂದು ಸಿಡ್ನಿಗೆ ಪ್ರಯಾಣಿಸಲಿದೆ ಎಂದು ಮೂಲಗಳು ತಿಳಿಸಿವೆ. ಜ.7ರಿಂದ 3ನೇ ಟೆಸ್ಟ್‌ ಆರಂಭಗೊಳ್ಳಲಿದ್ದು, ಸಿಡ್ನಿಯಲ್ಲಿ ಅಭ್ಯಾಸ ನಡೆಸಲು ಕೇವಲ ಒಂದು ದಿನ ಮಾತ್ರ ಸಿಗಲಿದೆ. 

ಸಿಡ್ನಿಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು, ಮೆಲ್ಬರ್ನ್‌ನಲ್ಲೇ ಉಳಿದುಕೊಂಡು ಅಭ್ಯಾಸ ನಡೆಸುತ್ತಿವೆ.