ಟೀಂ ಇಂಡಿಯಾಗೆ ಚೋಕರ್ಸ್ ಪಟ್ಟ, ಮಿಸ್ ಯು ಧೋನಿ ಎಂದ ಭಾರತ!
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರಾವೇಶ ಅಂತ್ಯಗೊಂಡಿದೆ. ಅಧಿಕಾರಯುತವಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಟೀಂ ಇಂಡಿಯಾದ ಹೀನಾಯ ಸೋಲು ಅಭಿಮಾನಿಗಳಿಗೆ ನಿರಾಸೆ ತಂದಿದೆ. ಇದೀಗ ಪಾಕಿಸ್ತಾನ ಸೇರಿದಂತೆ ಹಲವರು ಭಾರತ ತಂಡಕ್ಕೆ ಚೋಕರ್ಸ್ ಪಟ್ಟ ನೀಡಿದ್ದಾರೆ. ಇತ್ತ ಭಾರತೀಯ ಅಭಿಮಾನಿಗಳು ಐಪಿಎಲ್ ಬಹಿಷ್ಕರಿಸುವಂತೆ ಆಂದೋಲನ ಆರಂಭಿಸಿದ್ದಾರೆ. ಇದರ ನಡುವೆ ಮಿಸ್ ಯೂ ಧೋನಿ ಟ್ರೆಂಡ್ ಆಗಿದೆ.
ಆಡಿಲೇಡ್(ನ.10): ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಇದೀಗ ಬ್ಯಾಗ್ ಪ್ಯಾಕ್ ಮಾಡಿ ವಿಮಾನ ಏರಲು ಸಜ್ಜಾಗಿದೆ. ಆದರೆ ಭಾರತದ ಹೀನಾಯ ಸೋಲಿಗೆ ಆಕ್ರೋಶ ಕಡಿಮೆಯಾಗಿಲ್ಲ. ಹಲವರು ಕನಿಷ್ಠ ಹೋರಾಟ ನೀಡದೆ ಮುಗ್ಗರಿಸಿದ ಟೀಂ ಇಂಡಿಯಾ ವಿರುದ್ಧ ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು ಪಾಕಿಸ್ತಾನ ವಿರುದ್ಧದ ಹೀನಾಯ ಸೋಲಿಗಿಂತ ಇಂಗ್ಲೆಂಡ್ ವಿರುದ್ಧದ ಸೋಲೇ ಒಕೆ ಎಂದು ಸಮಾಧಾನ ಪಟ್ಟುಕೊಂಡಿದ್ದಾರೆ. ಇತ್ತ ಪಾಕಿಸ್ತಾನ ಅಭಿಮಾನಿಗಳು ಭಾರತ ತಂಡವನ್ನು ಟ್ರೋಲ್ ಮಾಡಿದ್ದಾರೆ. ಇದರ ಜೊತೆಗೆ ಹಲವರು ಸೇರಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೋಕರ್ಸ್ ಪಟ್ಟವನ್ನು ಟೀಂ ಇಂಡಿಯಾಗೆ ನೀಡಿದ್ದಾರೆ. ಸೌತ್ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಕ್ಕಿಂತ ಭಾರತವೇ ಚೋಕರ್ಸ್ ಎಂದಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ಚೋಕರ್ಸ್ ಟ್ರೆಂಡ್ ಆಗುತ್ತಿದೆ.
ಕೇವಲ ಚೋಕರ್ಸ್ ಮಾತ್ರವಲ್ಲ, 2007ರ ಟಿ20 ವಿಶ್ವಕಪ್ ಟೂರ್ನಿ ಗೆದ್ದ ಬಳಿಕ ಟೀಂ ಇಂಡಿಯಾ ಮತ್ತೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿಲ್ಲ. ಇನ್ನು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದಕ್ಕೆ ಕಾರಣ ಟೀಂ ಇಂಡಿಯಾ ಕ್ರಿಕೆಟಿಗರು, ಬಿಸಿಸಿಐ ಐಪಿಎಲ್ ಟೂರ್ನಿಗೆ ನೀಡಿರುವ ಮಹತ್ವವೇ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
T20 WORLD CUP ರಾಹುಲ್ ಕಳಪೆ ಪ್ರದರ್ಶನಕ್ಕೆ ಅಥಿಯಾ ಶೆಟ್ಟಿ ಟ್ರೋಲ್!
ಬಾಯ್ಕಾಟ್ ಐಪಿಎಲ್ ಎಂದು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಐಪಿಎಲ್ ಟೂರ್ನಿಗೆ ಎಲ್ಲಾ ಕ್ರಿಕೆಟಿಗರು ಮಹತ್ವ ನೀಡುತ್ತಾರೆ. ಅದೆಷ್ಟೇ ಇಂಜುರಿಯಾದರೂ ಐಪಿಎಲ್ ಟೂರ್ನಿಗೆ ರೆಡಿಯಾಗುತ್ತಾರೆ. ಅಂತಾರಾಷ್ಟ್ರೀಯ ಟೂರ್ನಿಗೆ ಇಂಜರಿಯಾಗಿ ಹೊರಗುಳಿಯುತ್ತಾರೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ವಿರಾವೇಶದ ಹೋರಾಟ ನಡೆಸುತ್ತಾರೆ. ಆದರೆ ಪ್ರಮುಖ ಟೂರ್ನಿಗಳಲ್ಲಿ ಸದ್ದಿಲ್ಲದೆ ಪೆವಿಲಿಯನ್ ಸೇರುತ್ತಾರೆ. ಹೀಗಾಗಿ ಐಪಿಎಲ್ ಬಹಿಷ್ಕರಿಸಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಚೋಕರ್ಸ್, ಬಾಯ್ಕಾಟ್ ಐಪಿಎಲ್ ಟ್ರೆಂಡಿಂಗ್ ನಡುವೆ ಇದೀಗ ಮಿಸ್ ಯು ಧೋನಿ ಟ್ರೆಂಡ್ ಆಗುತ್ತಿದೆ. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಟೂರ್ನಿ, ಏಕದಿನ ಟೂರ್ನಿ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ಧೋನಿ ನಾಯಕತ್ವದಲ್ಲೂ ಟೀಂ ಇಂಡಿಯಾ ಮುಗ್ಗರಿಸಿದೆ. ಆದರೆ ಕೊನೆಯ ಎಸೆತದವರೆಗೆ ಹೋರಾಟ ನೀಡಿದೆ. ಧೋನಿ ಅನುಪಸ್ಥಿತಿ ಟೀಂ ಇಂಡಿಯಾ ಅತೀಯಾಗಿ ಕಾಡುತ್ತಿದೆ ಎಂದು ಹಲವು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮನೆಗೆ, ಇಂಗ್ಲೆಂಡ್ ಫೈನಲ್‌ಗೆ..! ಸೆಮೀಸ್‌ನಲ್ಲಿ ಟೀಂ ಇಂಡಿಯಾಗೆ ಹೀನಾಯ ಸೋಲು
ಧೋನಿ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಟ್ರೋಫಿ ಗೆದ್ದಿಲ್ಲ, ಐಸಿಸಿ ಟೂರ್ನಿಗಳಲ್ಲಿ ಸಾಮರ್ಥ್ಯ ಸಾಬೀತುಪಡಿಸಿದ ನಾಯಕ ಎಂದು ರೋಹಿತ್ ಶರ್ಮಾ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ. ಧೋನಿ ನಾಯಕತ್ವದ ಕೊರತೆ, ಫಿನೀಶಿಂಗ್ ಕೊರತೆ ಟೀಂ ಇಂಡಿಯಾಗೆ ಅತೀಯಾಗಿ ಕಾಡುತ್ತಿರುವುದು ಸುಳ್ಳಲ್ಲ. ಆದರೆ ಆಯ್ಕೆ ಸಮಿತಿ, ಬಿಸಿಸಿಐ ಹಾಗೂ ಆಟಗಾರರು ಮಾಡುತ್ತಿರುವ ತಪ್ಪುಗಳಿಂದ ಭಾರತ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದದೆ ಅನ್ನೋದು ಸುಳ್ಳಲ್ಲ.