RCBಗೆ ಮತ್ತೊಂದು ಸೋಲು, ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್..!
* ಆರ್‌ಸಿಬಿ ತಂಡದೆದುರು ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್
* ರಾಜಸ್ಥಾನ ರಾಯಲ್ಸ್ ನೀಡಿದ್ದ 145 ರನ್ ಗುರಿ ತಲುಪಲು ವಿಫಲ
* ಸನ್‌ರೈಸರ್ಸ್ ಹೈದರಾಬಾದ್ ಎದುರು ಕೇವಲ 68 ರನ್‌ಗಳಿಗೆ ಆಲೌಟ್ ಆಗಿದ್ದ ಆರ್‌ಸಿಬಿ
ಬೆಂಗಳೂರು(ಏ.27): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಫಾಫ್ ಡು ಪ್ಲೆಸಿಸ್ (Faf du Plessis) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡವು ಮತ್ತೊಂದು ಸೋಲು ಕಂಡಿದೆ. ರಾಜಸ್ಥಾನ ರಾಯಲ್ಸ್ ನೀಡಿದ್ದ 145 ರನ್‌ಗಳ ಸಾಧಾರಣ ಗುರಿ ಬೆನ್ನತ್ತುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವಿಫಲವಾಯಿತು. ಏಪ್ರಿಲ್ 26ರಂದು ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೇವಲ 68 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿತ್ತು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ, ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ (Rajasthan Royals) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 144 ರನ್ ಬಾರಿಸುವ ಮೂಲಕ ಆರ್‌ಸಿಬಿಗೆ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೇವಲ 115 ರನ್ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು 29 ರನ್‌ಗಳ ರೋಚಕ ಸೋಲು ಕಂಡಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಮತ್ತೊಮ್ಮೆ ದಯನೀಯ ವೈಫಲ್ಯ ಅನುಭವಿಸಿದರು. ಇನ್ನು ಶಾಬಾಜ್ ಅಹಮ್ಮದ್ ಹಾಗೂ ದಿನೇಶ್ ಕಾರ್ತಿಕ್ (Dinesh Karthik), ರಾಜಸ್ಥಾನ ರಾಯಲ್ಸ್ ಎದುರು ಕೊಂಚ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಯಶಸ್ವಿಯಾಗಲಿಲ್ಲ.
ಜೋಸ್ ಬಟ್ಲರ್‌ರ (Jos Buttler) ‘ಜೋಶ್’ಗೆ ಕಡಿವಾಣ ಹಾಕಿದರೂ, ರಾಜಸ್ಥಾನವನ್ನು ಸೋಲಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಬೌಲರ್‌ಗಳು ಕೈಹಿಡಿದರೂ, ಬ್ಯಾಟರ್‌ಗಳ ದಯನೀಯ ವೈಫಲ್ಯದಿಂದ ಆರ್‌ಸಿಬಿ 29 ರನ್‌ಗಳ ಸೋಲು ಕಂಡಿತು. 8 ಪಂದ್ಯಗಳಲ್ಲಿ 6ನೇ ಗೆಲುವು ಸಾಧಿಸಿದ ರಾಜಸ್ಥಾನ, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಜೊತೆಗೆ ಆರ್‌ಸಿಬಿ ವಿರುದ್ಧ ಸತತ 5 ಪಂದ್ಯ ಸೋತಿದ್ದ ರಾಯಲ್ಸ್ ಕೊನೆಗೂ ಸೋಲಿನ ಸರಪಳಿಯನ್ನು ಕಳಚಿತು.
IPL 2022 ಸುಲಭ ಗುರಿ ಚೇಸ್ ಮಾಡಲು ವಿಫಲ, ರಾಜಸ್ಥಾನ ವಿರುದ್ಧ ಆರ್‌ಸಿಬಿ ಹೀನಾಯ ಸೋಲು!
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ, 68 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ರಿಯಾನ್ ಪರಾಗ್‌ರ ಹೋರಾಟದ ಅರ್ಧಶತಕದ ನೆರವಿನಿಂದ 20 ಓವರಲ್ಲಿ 8 ವಿಕೆಟ್‌ಗೆ 144 ರನ್ ಕಲೆಹಾಕಿತು. ಚೆಂಡು ನಿಂತು ಬರುತ್ತಿದ್ದ ಕಾರಣ, 145 ರನ್ ಗುರಿಯನ್ನು ಸುಲಭವಾಗಿ ಬೆನ್ನತ್ತುವುದು ಕಷ್ಟಎನ್ನುವ ಅರಿವಿನೊಂದಿಗೆ ಕಣಕ್ಕಿಳಿದ ಆರ್‌ಸಿಬಿಗೆ ರಾಯಲ್ಸ್ ಬೌಲರ್‌ಗಳು ಬೆವರಿಳಿಸಿದರು.
ಆರ್‌ಸಿಬಿ 19.3 ಓವರಲ್ಲಿ 115 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದ್ದಲ್ಲದೇ, ತಂಡದ ನೆಟ್ ರನ್‌ರೇಟ್ ಮತ್ತಷ್ಟುಕುಸಿಯಿತು. ಆರಂಭಿಕನಾಗಿ ಆಡಿದ ಕೊಹ್ಲಿಯನ್ನು ಔಟ್ ಮಾಡಿದ ಪ್ರಸಿದ್ಧ್ ರಾಯಲ್ಸ್‌ಗೆ ಮೊದಲ ಯಶಸ್ಸು ತಂದುಕೊಟ್ಟರೆ, ಕುಲ್ದೀಪ್ ಸೆನ್ ಸತತ 2 ಎಸೆತಗಳಲ್ಲಿ ಡು ಪ್ಲೆಸಿ ಹಾಗೂ ಮ್ಯಾಕ್ಸ್‌ವೆಲ್‌ರನ್ನು ಪೆವಿಲಿಯನ್‌ಗಟ್ಟಿ ಆರ್‌ಸಿಬಿ ಗಾಯದ ಮೇಲೆ ಬರೆ ಹಾಕಿದರು. ಅಶ್ವಿನ್ ತಮ್ಮ ಆಕರ್ಷಕ ಸ್ಪೆಲ್ ಮೂಲಕ ರಜತ್, ಶಾಬಾಜ್ ಹಾಗೂ ಸುಯಶ್‌ರನ್ನು ಔಟ್ ಮಾಡಿದರೆ, ದಿನೇಶ್ ಕಾರ್ತಿಕ್‌ರ ರನೌಟ್ ಆರ್‌ಸಿಬಿ ಗೆಲುವಿನ ಆಸೆಯನ್ನು ಕೈಬಿಡುವಂತೆ ಮಾಡಿತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಲ್ಲದೇ ರಿಯಾನ್ 4 ಕ್ಯಾಚ್ ಹಿಡಿದು ರಾಯಲ್ಸ್‌ಗೆ ಇನ್ನಷ್ಟು ಕೊಡುಗೆ ನೀಡಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೀರಸ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಯಾರೆಲ್ಲಾ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..