ಆಂಟಿಗಾ(ಮಾ.13): ಎವಿನ್‌ ಲೆವಿಸ್‌ ಹಾಗೂ ಶಾಯ್‌ ಹೋಪ್‌ ಮೊದಲ ವಿಕೆಟ್‌ಗೆ 192 ರನ್‌ಗಳ ಜತೆಯಾಟವಾಡುವ ಮೂಲಕ ಶ್ರೀಲಂಕಾ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡಿಸ್‌ ತಂಡ 5 ವಿಕೆಟ್‌ಗಳ ರೋಚಕ ಜಯ ಸಾಧಿಸಲು ನೆರವಾಗಿದ್ದಾರೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಿಂಡೀಸ್‌ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.

ಇಲ್ಲಿನ ಸರ್‌ ವಿವಿನ್‌ ರಿಚರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಿಂಡೀಸ್‌ಗೆ ಗೆಲ್ಲಲು 274 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡ ಕೇವಲ 2 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಎವಿನ್ ಲೆವಿಸ್‌ 121  ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 103 ರನ್‌ ಬಾರಿಸಿದರು. ಇದು ಲೆವಿಸ್‌ ಏಕದಿನ ಕ್ರಿಕೆಟ್‌ನಲ್ಲಿ ಬಾರಿಸಿದ 4ನೇ ಏಕದಿನ ಶತಕ ಎನಿಸಿತು. ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಶಾಯ್ ಹೋಪ್‌ 108 ಎಸೆತಗಳನ್ನು ಎದುರಿಸಿ 6 ಬೌಂಡರಿ ಸಹಿತ 84 ರನ್‌ ಬಾರಿಸಿದರು. 

ಶ್ರೀಲಂಕಾ ಎದುರಿನ ತವರಿನ ಸರಣಿಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ

ವೆಸ್ಟ್ ಇಂಡೀಸ್‌ ಕೊನೆಯ 3 ಓವರ್‌ಗಳಲ್ಲಿ ಗೆಲ್ಲಲು 31 ರನ್‌ಗಳ ಅಗತ್ಯವಿತ್ತು. ಫ್ಯಾಬಿಯನ್ ಅಲನ್‌ ಹಾಗೂ ನಿಕೋಲಸ್ ಪೂರನ್‌ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ವಿಂಡೀಸ್‌ ರೋಚಕ ಗೆಲುವು ದಾಖಲಿಸಿತು. 

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್‌ ಮಾಡಲಿಳಿದ ಪ್ರವಾಸಿ ಶ್ರೀಲಂಕಾ ತಂಡ ಆರಂಭಿಕ ಬ್ಯಾಟ್ಸ್‌ಮನ್‌ ಗುಣತಿಲಕ(96) ಶತಕ ವಂಚಿತ ಬ್ಯಾಟಿಂಗ್‌ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಚಾಂಡಿಮಲ್‌(71) ಸಮಯೋಚಿತ ಅರ್ಧಶತಕದ ನೆರವಿನಿಂದ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು 273 ರನ್‌ ಕಲೆಹಾಕಿತ್ತು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 273/8
ಗುಣತಿಲಕ: 96
ಜೇಸನ್‌ ಮೊಹಮ್ಮದ್: 47/3

ವೆಸ್ಟ್ ಇಂಡೀಸ್‌: 274/5
ಎವಿನ್ ಲೆವಿಸ್‌: 103
ತಿಸಾರ ಪೆರೆರಾ: 45/2