ಜಮೈಕಾ(ಮಾ.13): ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ದ ಅದ್ಭುತ ಪ್ರದರ್ಶನ ತೋರಿ ಟೆಸ್ಟ್ ಸರಣಿ ಜಯಿಸಿದ್ದ ವೆಸ್ಟ್ ಇಂಡೀಸ್‌ ತಂಡ ಇದೀಗ ತವರಿನಲ್ಲಿ ಶ್ರೀಲಂಕಾ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಹೊಸ ನಾಯಕ ಕ್ರೆಗ್‌ ಬ್ರಾಥ್‌ವೇಟ್‌ ನೇತೃತ್ವದಲ್ಲಿ ಕೆರಿಬಿಯನ್ನರು ಲಂಕಾ ಎದುರು ಕಾದಾಟ ನಡೆಸಲಿದೆ.

ವೆಸ್ಟ್‌ ಇಂಡೀಸ್‌ ಆಯ್ಕೆ ಸಮಿತಿ ಲಂಕಾ ವಿರುದ್ದದ ಎರಡು ಟೆಸ್ಟ್‌ ಪಂದ್ಯಗಳಿಗಾಗಿ 13 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ್ದು, ಜೆರ್ಮೈನ್‌ ಬ್ಲಾಕ್‌ವುಡ್‌ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಅನುಭವಿ ಆಟಗಾರರಾದ ಡೇರನ್‌ ಬ್ರಾವೋ, ಜೇಸನ್ ಹೋಲ್ಡರ್, ಶೆನಾನ್‌ ಗೇಬ್ರಿಯಲ್‌ ಹಾಗೂ ಕೀಮರ್‌ ರೋಚ್‌ಗೆ ಮಣೆ ಹಾಕಲಾಗಿದೆ.

ವೆಸ್ಟ್ ಇಂಡೀಸ್‌ ತಂಡವು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ವರ್ಷದ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಆಡಲು ಸಜ್ಜಾಗಿದೆ. ಈ ಮೊದಲು 2019ರಲ್ಲಿ ತವರಿನಲ್ಲಿ ಭಾರತ ವಿರುದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯಾಡಿತ್ತು. ಆ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎದುರು 2-0 ಅಂತರದಲ್ಲಿ ಶರಣಾಗಿತ್ತು. ಇದಾದ ಬಳಿಕ ಇಂಗ್ಲೆಂಡ್‌ ಪ್ರವಾಸದಲ್ಲಿ 1-2 ಅಂತರದಲ್ಲಿ ಸೋಲು ಕಂಡಿತ್ತು. ಬಳಿಕ ನ್ಯೂಜಿಲೆಂಡ್ ಎದುರು ವೆಸ್ಟ್ ಇಂಡೀಸ್‌ ತಂಡವು 2-0 ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಆದರೆ ಬಾಂಗ್ಲಾದೇಶ ವಿರುದ್ದ 2-0 ಅಂತರದಲ್ಲಿ ಟೆಸ್ಟ್ ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಮೂಲಕ ಗೆಲುವಿನ ರುಚಿಕಂಡಿತ್ತು.

ಜೇಸನ್ ಹೋಲ್ಡರ್ ತಲೆದಂಡ, ಬ್ರಾಥ್‌ವೇಟ್‌ಗೆ ವಿಂಡೀಸ್‌ ಟೆಸ್ಟ್ ನಾಯಕ ಪಟ್ಟ

ವೆಸ್ಟ್ ಇಂಡೀಸ್‌ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಮಾರ್ಚ್‌ 21ರಿಂದ ಆರಂಭವಾಗಲಿದ್ದು, ನಾರ್ತ್‌ ಸೌಂಡ್‌ನ ಸರ್ ವಿವಿನ್‌ ರಿಚರ್ಡ್ಸ್‌ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. 

ಲಂಕಾ ಎದುರಿನ ಟೆಸ್ಟ್‌ ಸರಣಿಗೆ ವೆಸ್ಟ್‌ ಇಂಡೀಸ್‌ ತಂಡ ಹೀಗಿದೆ ನೋಡಿ:

ಕ್ರೆಗ್ ಬ್ರಾಥ್‌ವೇಟ್‌(ನಾಯಕ), ಜೆರ್ಮೈನ್ ಬ್ಲಾಕ್‌ವುಡ್‌(ಉಪನಾಯಕ), ಬೋನರ್‌, ಡೇರನ್‌ ಬ್ರಾವೋ, ರಾಕೀಂ ಕಾರ್ನ್‌ವೆಲ್‌, ಜೋಶ್ವಾ ಡಿ ಸಿಲ್ವಾ, ಶೆನಾನ್ ಗೇಬ್ರಿಯಲ್‌, ಅಲ್ಜೆರಿ ಜೋಸೆಫ್‌, ಜೇಸನ್ ಹೋಲ್ಡರ್, ಕೈಲ್‌ ಮೆರೀಸ್‌, ಕೀಮರ್ ರೋಚ್‌, ಜೊಮೆಲ್‌ ವೆರ್ರಿಕನ್.