ಆಸ್ಟ್ರೇಲಿಯಾಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್..!
ತವರಿನಲ್ಲಿ ಐರ್ಲೆಂಡ್ ಎದುರಿನ ಟೆಸ್ಟ್ ಆಡಲಿರುವ ಇಂಗ್ಲೆಂಡ್
ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಟೋಕ್ಸ್
ಆ್ಯಷಸ್ ಸರಣಿಗೂ ಮುನ್ನ ಕಾಂಗರೂ ಪಡೆಗೆ ಸ್ಟೋಕ್ಸ್ ವಾರ್ನಿಂಗ್
ಲಂಡನ್(ಜೂ.01): ಮುಂಬರುವ ಆ್ಯಷಸ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡವು ಸಿದ್ದತೆ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿಯೂ ತಮ್ಮ ತಂಡವು ಆಕ್ರಮಣಕಾರಿಯಾಟವನ್ನು ಆಡಲಿದೆ ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಸದ್ಯ ಇಂಗ್ಲೆಂಡ್ ಕ್ರಿಕೆಟ್ ತಂಡವು ಸದ್ಯ ಬಜ್ ಬಾಲ್ ಶೈಲಿಯನ್ನು ಅಳವಡಿಸಿಕೊಂಡಿದ್ದು, ಇಂಗ್ಲೆಂಡ್ ಆಡಿದ ಕಳೆದ 12 ಪಂದ್ಯಗಳ ಪೈಕಿ 10 ಪಂದ್ಯಗಳನ್ನು ಜಯಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಸದ್ಯ ಇಂಗ್ಲೆಂಡ್ ತಂಡವು ಇಂದಿನಿಂದ(ಜೂ.01) ಲಾರ್ಡ್ಸ್ ಮೈದಾನದಲ್ಲಿ ಐರ್ಲೆಂಡ್ ಎದುರು ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಇದಾದ ಬಳಿಕ ಜೂನ್ 16ರಿಂದ ಆಸ್ಟ್ರೇಲಿಯಾ ಎದುರು ಎಡ್ಜ್‌ಬಾಸ್ಟನ್‌ನಲ್ಲಿ ಕಣಕ್ಕಿಳಿಯುವ ಮೂಲಕ ಆ್ಯಷಸ್ ಸರಣಿಯನ್ನಾಡಲಿದೆ. ಹೀಗಾಗಿ ತಮ್ಮ ನೇತೃತ್ವದ ಇಂಗ್ಲೆಂಡ್ ತಂಡವು ಐರ್ಲೆಂಡ್ ಹಾಗೂ ಆ್ಯಷಸ್ ಸರಣಿಯಲ್ಲಿ ಇದೇ ರಣತಂತ್ರದೊಂದಿಗೆ ಕಣಕ್ಕಿಳಿಯಲಿದೆ ಎಂದು ಎನ್ನುವ ಎಚ್ಚರಿಕೆಯನ್ನು ಬೆನ್ ಸ್ಟೋಕ್ಸ್ ರವಾನಿಸಿದ್ದಾರೆ.
"ಇದೇ ರಣತಂತ್ರವನ್ನು ಮುಂದುವರೆಸಬೇಕಾ ಎನ್ನುವುದಕ್ಕೆ, ಕೆಲವೊಂದು ಪ್ರಶ್ನೆಗಳಿಗೆ ನನ್ನಷ್ಟಕ್ಕೆ ನಾನೇ ಉತ್ತರಗಳನ್ನು ಕಂಡುಕೊಂಡಿದ್ದೇನೆ. ವೈಯುಕ್ತಿಕವಾಗಿ ಪ್ರತಿಯೊಬ್ಬರಿಗೂ ಹಾಗೂ ತಂಡಕ್ಕೂ ಈ ರಣತಂತ್ರ ತುಂಬಾ ಸ್ಪಷ್ಟವಾಗಿ ಅರ್ಥವಾಗಿದೆ ಹಾಗೂ ಅನುಕೂಲವೂ ಆಗಿದೆ. ನಾವಿದರಲ್ಲಿ ಯಶಸ್ಸನ್ನು ಗಳಿಸಿದ್ದೇವೆ. ಈ ರಣತಂತ್ರವು ಯಾವಾಗಲೂ ಗೆಲುವು ತಂದುಕೊಡುತ್ತದೆ ಅಥವಾ ಯಾವಾಗಲೂ ಸೋಲು ಕಾಣುತ್ತೇವೆ ಎಂದರ್ಥವಲ್ಲ, ಆದರೆ ಇದು ಡ್ರೆಸ್ಸಿಂಗ್ ರೂಂನಲ್ಲಿರುವ ಪ್ರತಿಯೊಬ್ಬರಿಗೂ ಹೊಸ ಹುರುಪು ತಂದುಕೊಡುತ್ತಿದೆ. ಹೀಗಾಗಿ ಎದುರಾಳಿ ಯಾರೇ ಇದ್ದರೂ ನಮ್ಮ ಆಕ್ರಮಣಕಾರಿ ಮನೋಭಾವ ಬದಲಾಗುವುದಿಲ್ಲ" ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ
ಕಳೆದ 17 ತಿಂಗಳ ಹಿಂದಷ್ಟೇ ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು 4-0 ಅಂತರದಲ್ಲಿ ಇಂಗ್ಲೆಂಡ್ ಹೀನಾಯ ಸೋಲು ಅನುಭವಿಸಿತ್ತು. ಆದರೆ ಇದಾದ ಬಳಿಕ 2021-22ರಿಂದೀಚೆಗೆ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಇಂಗ್ಲೆಂಡ್ ಟೆಸ್ಟ್ ತಂಡದ ಹೆಡ್‌ಕೋಚ್ ಆಗಿ ನೇಮಕವಾದ ಬಳಿಕ ಇಂಗ್ಲೆಂಡ್ ತಂಡದ ಆಟದ ಶೈಲಿಯಲ್ಲಿ ಗಣನೀಯವಾಗಿ ಬದಲಾವಣೆ ಕಂಡಿದ್ದು, 'ಬಜ್ ಬಾಲ್' ಶೈಲಿ ಇಂಗ್ಲೆಂಡ್ ತಂಡಕ್ಕೆ ಹೆಚ್ಚು ಯಶಸ್ಸನ್ನು ತಂದುಕೊಟ್ಟಿದೆ.
ಐರ್ಲೆಂಡ್ ಎದುರಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾತನಾಡಿದ ಬ್ರೆಂಡನ್ ಮೆಕ್ಕಲಂ, "ಇದು ಬೇರೆಯದ್ದೇ ತಂಡ, ನಾವು ಆಸ್ಟ್ರೇಲಿಯಾ ಎದುರು ಈಗ ಆಡುತ್ತಿಲ್ಲ. ಆದರೆ ನಾವು ಏನು ಮಾಡಬೇಕು ಎನ್ನುವುದರ ಕಡೆ ಗಮನ ಹರಿಸುತ್ತೇವೆ. ನಾವು ಎದುರಾಳಿಗೆ ಯಾವಾಗಲೂ ಗೌರವ ಕೊಡುತ್ತೇವೆ, ಆದರೆ ನಾವು ಏನು ಮಾಡಬೇಕು ಎನ್ನುವುದರ ಕಡೆ ಹೆಚ್ಚು ಗಮನ ಕೊಡುತ್ತೇವೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಹಾಗೂ ಬೆನ್ ಸ್ಟೋಕ್ಸ್ ನಾಯಕತ್ವದಡಿ ಇಂಗ್ಲೆಂಡ್ ತಂಡವು 12 ಟೆಸ್ಟ್ ಪಂದ್ಯಗಳನ್ನಾಡಿ 10 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಟೆಸ್ಟ್ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವ ರಕ್ಷಣಾತ್ಮಕ ಆಟವನ್ನು ಕೈಬಿಟ್ಟು, ಗೆಲುವಿಗಾಗಿ ಆಕ್ರಮಣಕಾರಿ ಆಟವನ್ನು ಅಳವಡಿಸಿಕೊಂಡಿರುವ ಇಂಗ್ಲೆಂಡ್ ತಂಡವು, ಇತ್ತೀಚೆಗೆ ಸಾಕಷ್ಟು ಯಶಸ್ಸು ಗಳಿಸುತ್ತಿದೆ.
ಆ್ಯಷಸ್ ಸರಣಿಗೆ ತನ್ನದೇ ಆದ ಇತಿಹಾಸವಿದೆ. ಈ ಸರಣಿಯನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿರುತ್ತದೆ. ಹೀಗಾಗಿ ಈ ಸರಣಿ ಎಷ್ಟು ಮಹತ್ವದ್ದು ಎನ್ನುವುದು ನಮ್ಮೆಲ್ಲರಿಗೂ ಗೊತ್ತಿದೆ. ನಮ್ಮ ಇಡೀ ತಂಡ, ಆಟಗಾರರು ಹಾಗೂ ಸಿಬ್ಬಂದಿಗಳು ಕೂಡಾ ಈ ಸರಣಿಯ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನುವ ಮೂಲಕ ಆಸ್ಟ್ರೇಲಿಯವನ್ನು ತವರಿನಲ್ಲಿ ಹೊಸಕಿ ಹಾಕುವ ಎಚ್ಚರಿಕೆಯನ್ನು ಬೆನ್ ಸ್ಟೋಕ್ಸ್. ನೀಡಿದ್ದಾರೆ.