ಕೊರೋನಾ ಹಾವಳಿ: ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಏಕದಿನ ಸರಣಿ ಮುಂದೂಡಿಕೆ..!
ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಆರಂಭಕ್ಕೆ ಮುನ್ನವೇ ಆಫ್ರಿಕಾ ತಂಡದ ಆಟಗಾರನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಪಂದ್ಯವನ್ನು ಭಾನುವಾರ(ಡಿ.06)ಕ್ಕೆ ಮುಂದೂಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕೇಪ್‌ಟೌನ್(ಡಿ.05): ದಕ್ಷಿಣ ಆಫ್ರಿಕಾದ ಕ್ರಿಕೆಟಿಗನೊಬ್ಬನಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಯಿತು.
ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಆಟಗಾರರು, ಅಂಪೈರ್‌ಗಳು, ರೆಫ್ರಿ ಹಾಗೂ ಸಂಬಂಧಪಟ್ಟ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಜಂಟಿಯಾಗಿ ಈ ನಿರ್ಧಾರ ಪ್ರಕಟಿಸಿದವು. ಸೋಂಕಿಗೆ ತುತ್ತಾಗಿರುವ ಆಟಗಾರನ ಹೆಸರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಹಿರಂಗಗೊಳಿಸಿಲ್ಲ. ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಒಬ್ಬ ಆಟಗಾರನಿಗೆ ಸೋಂಕು ತಗುಲಿತ್ತು. ಟಿ20 ಸರಣಿ ವೇಳೆ ಮತ್ತೊಬ್ಬ ಆಟಗಾರ ಸೋಂಕಿಗೆ ತುತ್ತಾಗಿದ್ದ. ಇದು 3ನೇ ಪ್ರಕರಣವಾದಂತೆ ಆಗಿದೆ.
ದೇಶಕ್ಕೆ ನಿಜಕ್ಕೂ ಕೊರೋನಾ ಲಸಿಕೆ ಅಗತ್ಯವಿದೆಯಾ ಎಂದು ಕೇಳಿ ಹಿಗ್ಗಾಮುಗ್ಗ ಟ್ರೋಲ್ ಆದ ಭಜ್ಜಿ..!
ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ಇಯಾನ್ ಮಾರ್ಗನ್ ನೇತೃತ್ವದ ಇಂಗ್ಲೆಂಡ್ ತಂಡ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಇದೀಗ ಹರಿಣಗಳ ನಾಡಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಏಕದಿನ ಸರಣಿಯಲ್ಲೂ ಅಂತಹದ್ದೇ ಪ್ರದರ್ಶನ ತೋರುವ ಕನವರಿಕೆಯಲ್ಲಿದೆ.