ಯಜುವೇಂದ್ರ ಚಾಹಲ್‌ ಮಾರಕ ಬೌಲಿಂಗ್ ದಾಳಿಯ ನಡುವೆಯೂ ಕೆಳ ಕ್ರಮಾಂಕದಲ್ಲಿ ಮೊಯಿನ್‌ ಅಲಿ ಹಾಗೂ ಡೇವಿಡ್‌ ವಿಲ್ಲಿ ಉತ್ತಮ ಜೊತೆಯಾಟವಾಡುವ ಮೂಲಕ ಇಂಗ್ಲೆಂಡ್‌ ತಂಡದ ಸಾಧಾರಣ ಮೊತ್ತಕ್ಕೆ ಕಾರಣರಾಗಿದ್ದರು. 102 ರನ್‌ ಗಳಿಸುವ ವೇಳೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ ಬಾಲಂಗೋಚಿಗಳ ಸಹಾಯದಿಂದ ಉತ್ತಮ ಮೊತ್ತ ಪೇರಿಸಿತು. 

ಲಂಡನ್‌ (ಜುಲೈ 14): ಯಜುವೇಂದ್ರ ಚಾಹಲ್‌ ಆಕರ್ಷಕ ಬೌಲಿಂಗ್ ಮೂಲಕ ಸಿಕ್ಕ ಉತ್ತಮ ಆರಂಭವನ್ನು ಮುಂದುವರಿಸಲು ವಿಫಲವಾದ ಭಾರತ, ಆತಿಥೇಯ ಇಂಗ್ಲೆಂಡ್‌ ವಿರುದ್ಧ 2ನೇ ಏಕದಿನ ಪಂದ್ಯದ ಗೆಲುವಿಗೆ ಸವಾಲಿನ ಮೊತ್ತದ ಗುರಿ ಪಡೆದುಕೊಂಡಿದೆ. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಮೊಯಿನ್‌ ಅಲಿ ಹಾಗೂ ಡೇವಿಡ್‌ ವಿಲ್ಲಿ 7ನೇ ವಿಕೆಟ್‌ಗೆ ಆಕರ್ಷಕ 62 ರನ್‌ ಜೊತೆಯಾಟವಾಡಿದ್ದರಿಂದ ಇಂಗ್ಲೆಂಡ್‌ ತಂಡ 49 ಓವರ್‌ಗಳಲ್ಲಿ 246 ರನ್‌ ಪೇರಿಸಿತು. ಐತಿಹಾಸಿಕ ಲಾರ್ಡ್ಸ್‌ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನಾಯಕ ರೋಹಿತ್‌ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಯಜುವೇಂದ್ರ ಚಾಹಲ್‌ (47ಕ್ಕೆ 4) ಬೌಲಿಂಗ್‌ ದಾಳಿ ನಡೆಸಿದರು. 102 ರನ್‌ಗಳಿಸುವ ವೇಳೆಗಾಗಲೇ ಇಂಗ್ಲೆಂಡ್‌ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಜೇಸನ್‌ ರಾಯ್‌, ಜಾನಿ ಬೇರ್‌ಸ್ಟೋ, ಜೋ ರೂಟ್‌, ನಾಯಕ ಜೋಸ್‌ ಬಟ್ಲರ್‌ ಹಾಗೂ ಆಲ್ರೌಂಡರ್‌ ಬೆನ್‌ ಸ್ಟೋಕ್ಸ್‌ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇನ್ನೇನು 150 ರನ್‌ಗಳ ಒಳಗಾಗಿ ಇಂಗ್ಲೆಂಡ್‌ ಆಲೌಟ್‌ ಆಗುತ್ತದೆ ಎನ್ನುವ ಹಂತದಲ್ಲಿಯೇ ಮೊಯಿನ್‌ ಅಲಿ, ಲಿವಿಂಗ್‌ ಸ್ಟೋನ್‌ರೊಂದಿಗೆ 6ನೇ ವಿಕೆಟ್‌ಗೆ 46 ರನ್‌ ಹಾಗೂ 7ನೇ ವಿಕೆಟ್‌ಗೆ ವಿಲ್ಲಿ ಜೊತೆ 62 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ ತಂಡದ ಮೊತ್ತವನ್ನು 240ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 

ಅದ್ಬುತವಾಗಿ ದಾಳಿ ನಡೆಸಿದ ಯಜುವೇಂದ್ರ ಚಾಹಲ್‌ (Yuzvendra Chahal) ಅವರ ಬೌಲಿಂಗ್‌ನ ವೈವಿಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಇಂಗ್ಲೆಂಡ್‌ (England) ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ ಆಟಗಾರರಿಗೆ ಮೈದಾನದಲ್ಲಿ ನೆಲೆಯೂರುವ ಅವಕಾಶವನ್ನೇ ಚಾಹಲ್‌ ನೀಡಲಿಲ್ಲ. ಮೊದಲ ವಿಕೆಟ್‌ಗೆ ಜೇಸನ್‌ ರಾಯ್‌ (Jason Roy) ಹಾಗೂ ಜಾನಿ ಬೇರ್‌ಸ್ಟೋ (Jonny Bairstow) 41 ರನ್‌ ಜೊತೆಯಾಟವಾಡಿದ್ದ ವೇಳೆ, ಹಾರ್ದಿಕ್‌ ಪಾಂಡ್ಯ, ರಾಯ್‌ರನ್ನು ಔಟ್‌ ಮಾಡಿ ಭಾರತಕ್ಕೆ (India) ಮೊದಲ ಯಶ ನೀಡಿದ್ದರು. ಅದಾದ ಬಳಿಕ, ಜಾನಿ ಬೇರ್‌ಸ್ಟೋ ವಿಕೆಟ್‌ ಮೂಲಕ ಚಾಹಲ್‌ ಪಂದ್ಯದಲ್ಲಿ ತಮ್ಮ ಮೊದಲ ವಿಕೆಟ್ ಪಡೆದರು. ತಮ್ಮ ಫುಲ್ಲರ್‌ ಎಸೆತವನ್ನು ಸ್ಲಾಗ್‌ ಸ್ವೀಪ್‌ ಮಾಡಲು ಯತ್ನಿಸಿದ ಬೇರ್‌ಸ್ಟೋ ಬೌಲ್ಡ್‌ ಆಗಿ ನಿರ್ಮಿಸಿದರು. 38 ಎಸೆತಗಳಲ್ಲಿ 38 ರನ್‌ ಬಾರಿಸಿ ಬೇರ್‌ಸ್ಟೋ ಪೆವಿಲಿಯನ್‌ಗೇರಿದರು.

ಅದಾದ ಕೆಲ ಹೊತ್ತಿನಲ್ಲಿಯೇ ಜೋ ರೂಟ್‌ರನ್ನು ಅವರು ಪೆವಿಲಿಯನ್‌ಗಟ್ಟಿದರು. 21 ಎಸೆತ ಆಡಿದ ರೂಟ್‌ ಕೇವಲ 11 ರನ್‌ ಬಾರಿಸಿದ್ದರು. ಇವರನ್ನು ಆಕರ್ಷಕವಾಗಿ ಎಲ್‌ಬಿ ಮಾಡಿದಾಗ ಇಂಗ್ಲೆಂಡ್‌ 82 ರನ್‌ ಬಾರಿಸಿತ್ತು. ಬಳಿಕ 23 ಎಸೆತಗಳಲ್ಲಿ 21 ರನ್‌ ಬಾರಿಸಿದ್ದ ಸ್ಟೋಕ್ಸರನ್ನೂ ಚಾಹಲ್‌ ಎಲ್‌ ಬಿ ಮಾಡಿದರು. ಕೊನೆಯಲ್ಲಿ ಇಂಗ್ಲೆಂಡ್‌ ತಂಡವನ್ನು 250 ರನ್‌ಗಳ ಗಡಿ ದಾಟಿಸುವ ವಿಶ್ವಾಸದಲ್ಲಿದ್ದ ಮೊಯಿನ್‌ ಅಲಿ ವಿಕೆಟ್‌ ಉರುಳಿಸಿ ನಾಲ್ಕು ವಿಕೆಟ್‌ ಸಾಧನೆ ಮಾಡಿದರು.

ಇದನ್ನೂ ಓದಿ: ಸುನೀಲ್ ಗವಾಸ್ಕರ್‌ಗೆ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಿದ ಮೋಹನ್‌ ಭಾಗವತ್‌

ಕೊಹ್ಲಿಗೆ ಸ್ಥಾನ: ಇನ್ನೊಂದೆಡೆ ನಾಯಕ ಜೋಸ್‌ ಬಟ್ಲರ್‌ ಈ ಪಂದ್ಯದಲ್ಲೂ ಫ್ಲಾಪ್‌ ಆದರು. ಕೇವಲ 5 ಎಸೆತಗಳಲ್ಲಿ 4 ರನ್‌ ಬಾರಿಸಿದ್ದ ವೇಳೆ ಮೊಹಮದ್‌ ಶಮಿ ಎಸೆತದಲ್ಲಿ ಬೌಲ್ಡ್‌ ಆದರು. ಗಾಯದ ಕಾರಣದಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ, ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್‌ ಸ್ಥಾನದಲ್ಲಿ ಆಟವಾಡಿದರು.

ಇದನ್ನೂ ಓದಿ: ರಾಬಿನ್ ಉತ್ತಪ್ಪ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಸಂತಸ ಹಂಚಿಕೊಂಡ ಅನುಭವಿ ಕ್ರಿಕೆಟಿಗ

ಪಂದ್ಯ ವೀಕ್ಷಿಸಿದ ಧೋನಿ-ರೈನಾ: ಟೀಮ್‌ ಇಂಡಿಯಾ ಮಾಜಿ ಆಟಗಾರರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಬಹುಕಾಲ ಜೊತೆಯಾಗಿಯೇ ಆಟವಾಡಿದ್ದ ಎಂಎಸ್ ಧೋನಿ ಹಾಗೂ ಸುರೇಶ್‌ ರೈನಾ ಜೊತೆಯಾಗಿ ಲಾರ್ಡ್ಸ್‌ನಲ್ಲಿ ಪಂದ್ಯ ವೀಕ್ಷಿಸಿದರು. ಕ್ರಿಕೆಟ್‌ ದಿನಗಳಲ್ಲಿ ಸಸಾಕಷ್ಟು ಉತ್ತ ಜೊತೆಯಾಟಗಳಲ್ಲಿ ಭಾಗಿಯಾಗಿದ್ದ ಈ ಜೋಡಿ 2020ರ ಆಗಸ್ಟ್‌ 15 ರಂದು ಒಂದೇ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.


2022ರ ಐಪಿಎಲ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ರೈನಾರನ್ನು ತಂಡದಿಂದ ಕೈಬಿಟ್ಟಿದ್ದಲ್ಲದೆ, ಅವರು ಹರಾಜಿನಲ್ಲಿ ಅನ್‌ಸೋಲ್ಡ್‌ ಆಗಿದ್ದರು. ಆದರೂ ಕೂಡ ಅವರನ್ನು ತಂಡಕ್ಕೆ ಖರೀದಿಸಿರಲಿಲ್ಲ. ಸುರೇಶ್‌ ರೈನಾ ಸೋಷಿಯಲ್‌ ಮೀಡಿಯಾದಲ್ಲಿ ಈ ಚಿತ್ರವನ್ನು ಪೋಸ್ಟ್‌ ಮಾಡಿದ್ದು, ಪೋಸ್ಟ್‌ ಮಾಡಿದ ಕೆಲವೇ ಸಮಯದಲ್ಲಿ ವೈರಲ್ ಆಗಿದೆ.