ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಜೋಫ್ರಾ ಆರ್ಚರ್‌ಗೆ ಮತ್ತೆ ನಿರಾಸೆಯಾಗಿದೆ. ಮೊದಲ ಟೆಸ್ಟ್‌ನಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಭಾರತದ ವಿರುದ್ಧ ಗೆಲುವಿನ ಲಯ ಮುಂದುವರಿಸಲು ಇಂಗ್ಲೆಂಡ್ ತಂಡ ಎದುರು ನೋಡುತ್ತಿದೆ.
ಬರ್ಮಿಂಗ್‌ಹ್ಯಾಮ್: ಭಾರತ ಎದುರು ಜುಲೈ 02ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಮಾರಕ ವೇಗಿ ಜೋಫ್ರಾ ಆರ್ಚರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಬೆನ್ ಸ್ಟೋಕ್ಸ್ ನೇತೃತ್ವದ ಆತಿಥೇಯ ಇಂಗ್ಲೆಂಡ್ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಎರಡನೇ ಟೆಸ್ಟ್‌ಗೂ ಕಣಕ್ಕಿಳಿಯಲಿದೆ.
ಕೈಬೆರಳಿನ ಗಾಯಕ್ಕೊಳಗಾಗಿದ್ದ ಇಂಗ್ಲೆಂಡ್ ಮಾರಕ ವೇಗಿ ಚೇತರಿಸಿಕೊಂಡಿದ್ದರು. ಹೀಗಾಗಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದರು. ಹೀಗಾಗಿ ಜೋಫ್ರಾ ಆರ್ಚರ್, ಎರಡನೇ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿತ್ತು. ಆದರೆ ಜೋಫ್ರಾ ಆರ್ಚರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಬಲಗೈ ವೇಗಿ ವಿಫಲವಾಗಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ರಿಸ್ ವೋಕ್ಸ್, ಜೋಶ್ ಟಂಗ್ ಹಾಗೂ ಬ್ರೈಡನ್ ಕಾರ್ಸ್ ಇಂಗ್ಲೆಂಡ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
ಇನ್ನು ಇಂಗ್ಲೆಂಡ್ ತಂಡ ಪ್ರಕಟಿಸುವ ಮುನ್ನ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, ಜೋಫ್ರಾ ಆರ್ಚರ್ ಕೌಟುಂಬಿಕ ತುರ್ತಿನಿಂದಾಗಿ ತಂಡ ಕೂಡಿಕೊಳ್ಳುವುದು ತಡವಾಗಿದೆ ಎಂದು ಮಹತ್ವದ ಅಪ್‌ಡೇಟ್ ನೀಡಿತ್ತು. ಇನ್ನುಳಿದಂತೆ ಇಂಗ್ಲೆಂಡ್ ತಂಡವು ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿಯೇ ಗುರುತಿಸಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಡಕೆಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ 149 ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಜಾಕ್ ಕ್ರಾಲಿ, ಓಲಿ ಪೋಪ್, ಮಾಜಿ ನಾಯಕ ಜೋ ರೂಟ್ ಹಾಗೂ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚುತ್ತಿದ್ದು, ತಂಡದ ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯರಿಗೆ ಗೆಲ್ಲಲು 371 ರನ್‌ಗಳ ಕಠಿಣ ಗುರಿ ನೀಡಿತ್ತು. ಈ ಗುರಿಯನ್ನು ಇಂಗ್ಲೆಂಡ್ ತಂಡವು ಕೇವಲ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ;
ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೇಮೀ ಸ್ಮಿತ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೆಡನ್ ಕಾರ್ಸ್, ಜೋಶ್ ಟಂಗ್, ಶೋಯೇಬ್ ಬಷೀರ್.
ಇನ್ನು ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿರುವ ಟೀಂ ಇಂಡಿಯಾ, ಎರಡನೇ ಟೆಸ್ಟ್‌ನಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಉದ್ದೇಶದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು, ಎಡಗೈ ವೇಗಿ ಅರ್ಶದೀಪ್ ಸಿಂಗ್ ಇಲ್ಲವೇ ಆಕಾಶ್‌ದೀಪ್ ಸಿಂಗ್ ಭಾರತ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ನು ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಇಲ್ಲವೇ ಕುಲ್ದೀಪ್ ಯಾದವ್ ಭಾರತ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವುದರಿಂದ ಶುಭ್‌ಮನ್ ಗಿಲ್ ಪಡೆ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಒಂದು ವೇಳೆ ಎರಡನೇ ಟೆಸ್ಟ್ ಪಂದ್ಯಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಅಲಭ್ಯರಾದರೇ, ಟೀಂ ಇಂಡಿಯಾ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ಮಂಕಾಗುವ ಸಾಧ್ಯತೆಯಿದೆ.
