ಎರಡನೇ ಟೆಸ್ಟ್ ಪಂದ್ಯಕ್ಕೆ ಎರಡು ದಿನ ಬಾಕಿ ಇರುವಾಗಲೇ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಜೋಫ್ರಾ ಆರ್ಚರ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾಗಿರುವುದರಿಂದ ತಂಡದಿಂದ ಹೊರಗುಳಿದಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಗೆದ್ದ ತಂಡವನ್ನೇ ಎರಡನೇ ಟೆಸ್ಟ್‌ಗೂ ಉಳಿಸಿಕೊಳ್ಳಲಾಗಿದೆ.

ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೆ ಎರಡು ದಿನ ಬಾಕಿ ಇರುವಾಗಲೇ ಸೋಮವಾರ ಸಂಜೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಡುವ ಹನ್ನೊಂದರ ಬಳಗವನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪ್ರಕಟಿಸಿದೆ. ಭಾರತ ಎದುರು ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಕಣಕ್ಕಿಳಿಯಲಿದೆ. ಇಂಗ್ಲೆಂಡ್ ತಂಡದ ವಿನ್ನಿಂಗ್ ಕಾಂಬಿನೇಷನ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಆದರೆ ನಾಲ್ಕು ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಮಾರಕ ವೇಗಿ ಜೋಫ್ರಾ ಆರ್ಚರ್, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸದೇ ಹೋಗಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಜೋಫ್ರಾ ಆರ್ಚರ್ ಸಂಪೂರ್ಣ ಫುಟ್ ಆಗಿದ್ದರು. ಹೀಗಿದ್ದೂ ಏಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸದೇ ಇದ್ದದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿವದೆ. ಇದೀಗ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡದ ಪರ ಎರಡನೇ ಟೆಸ್ಟ್‌ನಲ್ಲಿ ಸ್ಥಾನಪಡೆಯದೇ ಇರುವುದಕ್ಕೆ ಕಾರಣ ಬಹಿರಂಗವಾಗಿದೆ. ಅಂದಹಾಗೆ ಜೋಫ್ರಾ ಆರ್ಚರ್, ಸೋಮವಾರ ಇಂಗ್ಲೆಂಡ್ ತಂಡದ ಪ್ರಾಕ್ಟೀಸ್ ಸೆಷನ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆರ್ಚರ್ ಕುಟುಂಬದಲ್ಲಿ ಎದುರಾದ ಒಂದು ಎಮರ್ಜೆನ್ಸಿ ಕಾರಣದಿಂದಾಗಿ ತಂಡ ತೊರೆದು ಮನೆಗೆ ವಾಪಾಸ್ಸಾಗಿದ್ದಾರೆ.

ಆರ್ಚರ್ ಯಾಕೆ ಎರಡನೇ ಟೆಸ್ಟ್ ಆಡುತ್ತಿಲ್ಲ?

ಇಂಗ್ಲೆಂಡ್ ತಂಡವು ಭಾರತ ಎದುರು ಆಡಲಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಇಲ್ಲದೇ ಕಣಕ್ಕಿಳಿಯಲಿದೆ. ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ ಆರ್ಚರ್ ಕುಟುಂಬದಲ್ಲಿ ತುರ್ತು ಘಟನೆ ಸಂಭವಿಸಿದೆ. ಈ ಕಾರಣಕ್ಕಾಗಿ ಆರ್ಚರ್ ದಿಢೀರ್ ಎನ್ನುವಂತೆ ತಂಡವನ್ನು ತೊರೆದು ತಮ್ಮ ಮನೆಗೆ ವಾಪಾಸ್ಸಾಗಿದ್ದಾರೆ. ಇನ್ನು ಜೋಫ್ರಾ ಆರ್ಚರ್, ಸೋಮವಾರ ಇಂಗ್ಲೆಂಡ್ ಟೆಸ್ಟ್ ತಂಡದ ಪ್ರಾಕ್ಟೀಸ್ ಸೆಷನ್‌ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಜೋಫ್ರಾ ಆರ್ಚರ್ 2021ರಲ್ಲಿ ಅಂದರೆ ಬರೋಬ್ಬರಿ 4 ವರ್ಷಗಳ ಹಿಂದೆ ಕೊನೆಯ ಬಾರಿಗೆ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಫಿಟ್ನೆಸ್ ಹಾಗೂ ಗಾಯದ ಕಾರಣಗಳಿಂದಾಗಿ ಆರ್ಚರ್ ರೆಡ್ ಬಾಲ್ ಪಂದ್ಯಗಳಿಂದ ಹೊರಗುಳಿಯುತ್ತಲೇ ಬಂದಿದ್ದಾರೆ. ಒಂದು ವೇಳೆ ಎರಡನೇ ಟೆಸ್ಟ್‌ಗೆ ಜೋಫ್ರಾ ಆರ್ಚರ್ ತಂಡ ಕೂಡಿಕೊಂಡಿದ್ದರೇ ಇಂಗ್ಲೆಂಡ್ ವೇಗದ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬರುವ ಸಾಧ್ಯತೆಯಿತ್ತು.

ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ಇಲ್ಲ:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಬರೋಬ್ಬರಿ 371 ರನ್‌ಗಳ ಕಠಿಣ ಗುರಿಯನ್ನು ಟೀಂ ಇಂಡಿಯಾ ನೀಡಿತ್ತು. ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಬಾರಿಸಿದ ಆಕರ್ಷಕ 149 ರನ್‌ಗಳ ನೆರವಿನಿಂದ ಅವಿಸ್ಮರಣೀಯ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಜೋ ರೂಟ್ ಹಾಗೂ ಜಾಕ್ ಕ್ರಾಲಿ ಕೂಡಾ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಗೆಲುವಿಗೆ ತಮ್ಮದೇ ಆದ ಉಪಯುಕ್ತ ಕಾಣಿಕೆ ನೀಡಿದರು.

ಏಜ್‌ಬಾಸ್ಟನ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಇಂಗ್ಲೆಂಡ್:

ಬರ್ಮಿಂಗ್‌ಹ್ಯಾಮ್‌ನ ಏಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಟ್ರ್ಯಾಕ್ ರೆಕಾರ್ಡ್ ಅದ್ಭುತವಾಗಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡವು ಈ ಮೈದಾನದಲ್ಲಿ ಇದುವರೆಗೂ 56 ಟೆಸ್ಟ್ ಪಂದ್ಯಗಳನ್ನಾಡಿದೆ.ಈ ಪೈಕಿ 30 ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ. 11 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿರುವ ಇಂಗ್ಲೆಂಡ್, 15 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಹೀಗಿದೆ;

ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೇಮೀ ಸ್ಮಿತ್(ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೆಡನ್ ಕಾರ್ಸ್‌, ಜೋಶ್ ಟಂಗ್, ಶೋಯೇಬ್ ಬಷೀರ್.