ನವದೆಹಲಿ(ಫೆ.03): ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟೆಸ್ಟ್ ಸರಣಿಗೆ ದಿನಗಣನೆ ಆರಂಭವಾಗಿದ್ದು, ವರ್ಷದ ಬಳಿಕ ಭಾರತದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಇಂಗ್ಲೆಂಡ್‌ ಮಾರಕ ವೇಗಿ ಜೋಫ್ರಾ ಆರ್ಚರ್‌ ಬಗ್ಗೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತುಂಬಾ ಜಾಗರೂಕರಾಗಿರಬೇಕೆಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಎಚ್ಚರಿಕೆ ನೀಡಿದ್ದಾರೆ.

ಐಪಿಎಲ್‌ ಟೂರ್ನಮೆಂಟ್‌ನಲ್ಲಿ ಈಗಾಗಲೇ ಧೂಳೆಬ್ಬಿಸಿರುವ ಜೋಫ್ರಾ ಆರ್ಚರ್‌ ಇದುವರೆಗೂ ಇಂಗ್ಲೆಂಡ್‌ ಪರ 11 ಟೆಸ್ಟ್ ಪಂದ್ಯಗಳನ್ನಾಡಿ 38 ವಿಕೆಟ್ ಕಬಳಿಸಿದ್ದಾರೆ. ಆರ್ಚರ್‌ ವೇಗದ ಬೌಲಿಂಗ್‌ ಪಿಚ್‌ನಲ್ಲಿ ವಿಕೆಟ್‌ ಕಬಳಿಸಿರಬಹುದು ಹೀಗಿದ್ದೂ ಭಾರತದಲ್ಲೂ ವಿಕೆಟ್‌ ಕಬಳಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ಐಪಿಎಲ್‌ ಟೂರ್ನಿಗಳಲ್ಲಿ ಸಾಬೀತು ಮಾಡಿದ್ದಾರೆ.

ಇಂಗ್ಲೆಂಡ್‌ ಒಂದು ಟೆಸ್ಟ್ ಪಂದ್ಯ ಗೆಲ್ಲೋದು ಅನುಮಾನ: ಗೌತಮ್ ಗಂಭೀರ್

ಸ್ಟಾರ್ ಸ್ಪೋರ್ಟ್ಸ್‌ ಆಯೋಜಿಸಿದ್ದ ಗೇಮ್‌ ಪ್ಲಾನ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದ ಗಂಭೀರ್, ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಮರ್ನಾಲ್ಕು ವೇಗದ ಬೌಲರ್‌ಗಳು ಮಾತ್ರ ಅಪಾಯಕಾರಿ ಬೌಲರ್‌ಗಳೆನಿಸಿದ್ದಾರೆ. ಈ ಪೈಕಿ ಜಸ್ಪ್ರೀತ್ ಬುಮ್ರಾ, ಕಗಿಸೋ ರಬಾಡ, ಜೋಫ್ರಾ ಆರ್ಚರ್‌ ಹಾಗೂ ಪ್ಯಾಟ್‌ ಕಮಿನ್ಸ್‌ ಅಗ್ರಗಣ್ಯ ಬೌಲರ್‌ಗಳೆನಿಸಿದ್ದಾರೆ. ಈ ಪೈಕಿ ಜೋಫ್ರಾ ಆರ್ಚರ್‌ ಇದೇ ಮೊದಲ ಬಾರಿಗೆ ಉಪಖಂಡದಲ್ಲಿ ಟೆಸ್ಟ್ ಸರಣಿಯಾಡಲು ಸಜ್ಜಾಗಿದ್ದಾರೆ. ಆರ್ಚರ್‌ ಹೇಗೆ ದೀರ್ಘಕಾಲ ಬೌಲಿಂಗ್ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇದೇ ವೇಳೆ ಇಂಗ್ಲೆಂಡ್‌ ಬೌಲರ್‌ಗಳು ಭಾರತದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸದಂತೆ ನೋಡಿಕೊಂಡರೆ, ಟೀಂ ಇಂಡಿಯಾವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರು ಕಳೆದ 10 ಪಂದ್ಯಗಳನ್ನಾಡಿ 78ರ ಬ್ಯಾಟಿಂಗ್‌ ಸರಾಸರಿಯಲ್ಲಿ 1248 ರನ್ ಬಾರಿಸಿದ್ದಾರೆ. ಈ ಹಿಂದೆ ಇಂಗ್ಲೆಂಡ್‌ ಎರಡು ಬಾರಿ ಭಾರತ ಪ್ರವಾಸ ಕೈಗೊಂಡಿದ್ದಾಗಲೂ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಸರಣಿಶ್ರೇಷ್ಠ ಗೌರವ ಪ್ರಶಸ್ತಿಗೆ ಭಾಜನರಾಗಿದ್ದರು.

ಭಾರತ- ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 05ರಿಂದ ಆರಂಭವಾಗಲಿದ್ದು, ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈ ಆತಿಥ್ಯವನ್ನು ವಹಿಸಿದ್ದರೆ, ಉಳಿದೆರಡು ಪಂದ್ಯಗಳಿಗೆ ಅಹಮದಾಬಾದ್‌ನ ಸರ್ದಾರ್ ಪಟೇಲ್ ಮೈದಾನ ಆತಿಥ್ಯವನ್ನು ವಹಿಸಿದೆ.