ನವದೆಹಲಿ(ಫೆ.01): ಬಹುನಿರೀಕ್ಷಿತ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬರೋಬ್ಬರಿ ವರ್ಷದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಇಂಗ್ಲೆಂಡ್‌ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಹೌದು, ಫೆಬ್ರವರಿ 05ರಿಂದ ಚೆನ್ನೈನಲ್ಲಿ ಭಾರತ-ಇಂಗ್ಲೆಂಡ್‌ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವು ಯಾವೊಂದು ಪಂದ್ಯವೂ ಗೆಲ್ಲೋದು ಅನುಮಾನ ಎಂದು ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ತವರಿನಲ್ಲಿ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿ ಟೀಂ ಇಂಡಿಯಾ ಗುರುತಿಸಿಕೊಂಡಿದೆ. ಇನ್ನು ಇಂಗ್ಲೆಂಡ್ ತಂಡ ಕೂಡಾ ಶ್ರೀಲಂಕಾ ವಿರುದ್ದ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್‌ ಮಾಡುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಸ್ಪಿನ್‌ ಪಿಚ್‌ನಲ್ಲಿ ಇಂಗ್ಲೆಂಡ್‌ ಸ್ಪಿನ್ನರ್‌ಗಳು ಮ್ಯಾಜಿಕ್‌ ಮಾಡಿದ್ದರಿಂದ, ಭಾರತ ವಿರುದ್ದವೂ ಅಂತಹದ್ದೇ ಪ್ರದರ್ಶನ ತೋರುವ ಕನವರಿಕೆಯಲ್ಲಿದೆ.

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್‌: ಪ್ರೇಕ್ಷಕರಿಗೆ ಪ್ರವೇಶ?
 
ಸ್ಟಾರ್‌ ಸ್ಪೋರ್ಟ್ಸ್‌ನ ಗೇಮ್‌ಪ್ಲಾನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್‌, ಭಾರತದ ವಾತಾವರಣದ ಲಾಭ ಪಡೆಯುವಂತಹ ಸ್ಪಿನ್ನರ್‌ಗಳು ಇಂಗ್ಲೆಂಡ್ ತಂಡದಲ್ಲಿ ಇಲ್ಲ. ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ದ 3-0 ಇಲ್ಲವೇ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಉತ್ತಮ ಪ್ರದರ್ಶನ ತೋರಿದರೆ ಭಾರತ 3-1 ಅಂತರದಲ್ಲಿ ಟೆಸ್ಟ್ ಸರಣಿ ಜಯಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡವು ಇಂಗ್ಲೆಂಡ್ ಎದುರು 3-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲಲಿದೆ. ಪಿಂಕ್‌ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪರಿಸ್ಥಿತಿಯ ಲಾಭ ಪಡೆದರೆ ಉಭಯ ತಂಡಗಳು ಗೆಲ್ಲಲು 50-50 ಸಾಧ್ಯತೆಗಳಿವೆ. ಇದನ್ನು ಹೊರತುಪಡಿಸಿದಂತೆ ಇಂಗ್ಲೆಂಡ್‌ ತಂಡವು ಈ ಟೆಸ್ಟ್ ಸರಣಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲುವುದು ಅನುಮಾನ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
 
ಭಾರತ-ಇಂಗ್ಲೆಂಡ್ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈನ ಎಂ. ಚಿದಂಬರಂ ಮೈದಾನ ಆತಿಥ್ಯ ವಹಿಸಿದ್ದರೆ, ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಅಹಮದಾಬಾದ್‌ನ ಮೊಟೇರಾ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.