ಗಾಯದ ಸಮಸ್ಯೆಗಳ ನಡುವೆ ಭಾರತ ತಂಡ ಇಂದು ಮ್ಯಾಂಚೆಸ್ಟರ್‌ನಲ್ಲಿ ನಾಲ್ಕನೇ ಟೆಸ್ಟ್ ಆರಂಭಿಸಲಿದೆ. ಸರಣಿಯಲ್ಲಿ ಹಿನ್ನಡೆಯಲ್ಲಿರುವ ಭಾರತಕ್ಕೆ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡವಿದೆ. ಹಲವು ಆಟಗಾರರ ಗಾಯದಿಂದಾಗಿ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ.
ಮ್ಯಾಂಚೆಸ್ಟರ್:ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದರೆ, ಎರಡನೇ ಪಂದ್ಯವನ್ನು ಗೆದ್ದು ಭಾರತ ಸರಣಿಯಲ್ಲಿ ಸಮಬಲ ಸಾಧಿಸಿತು. ಆದರೆ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ 22 ರನ್‌ಗಳ ಅಂತರದ ಜಯದೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಲಾರ್ಡ್ಸ್‌ನಲ್ಲಿ ಜಯದ ಸನಿಹದಲ್ಲಿದ್ದರೂ ಸೋಲನುಭವಿಸಿದ ಭಾರತಕ್ಕೆ ಮ್ಯಾಂಚೆಸ್ಟರ್‌ನಲ್ಲಿ ಮತ್ತೊಂದು ಸೋಲಿನ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಮ್ಯಾಂಚೆಸ್ಟರ್‌ನಲ್ಲೂ ಸೋತರೆ ಭಾರತ ಸರಣಿಯನ್ನು ಕಳೆದುಕೊಳ್ಳಲಿದೆ. ಆಂಡರ್‌ಸನ್-ತೆಂಡೂಲ್ಕರ್ ಟ್ರೋಫಿ ಜಯಿಸಬೇಕಿದ್ದರೇ ಟೀಂ ಇಂಡಿಯಾ, ಶತಾಯಗತಾಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ನಾಲ್ಕನೇ ಪಂದ್ಯಕ್ಕೆ ಇಳಿಯುವಾಗ ಗಾಯದ ಸಮಸ್ಯೆ ಭಾರತ ತಂಡವನ್ನು ಕಾಡುತ್ತಿದೆ. ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಮೂರನೇ ಟೆಸ್ಟ್‌ನಲ್ಲಿ ಗಾಯಗೊಂಡ ಆಕಾಶ್ ದೀಪ್ ನಾಲ್ಕನೇ ಟೆಸ್ಟ್‌ನಲ್ಲಿ ಆಡುವುದಿಲ್ಲ. ಅಭ್ಯಾಸದ ವೇಳೆ ಗಾಯಗೊಂಡ ಮತ್ತೊಬ್ಬ ವೇಗಿ ಅರ್ಷದೀಪ್ ಸಿಂಗ್ ಕೂಡ ನಾಲ್ಕನೇ ಟೆಸ್ಟ್‌ನಲ್ಲಿ ಆಡುವುದಿಲ್ಲ. ಮೂರನೇ ಟೆಸ್ಟ್‌ನಲ್ಲಿ ಗಾಯಗೊಂಡ ವಿಕೆಟ್ ಕೀಪರ್ ರಿಷಭ್ ಪಂತ್ ನಾಲ್ಕನೇ ಟೆಸ್ಟ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ಮಾತ್ರ ಕಣಕ್ಕಿಳಿದರೆ, ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಭಾರತ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ತಂಡದಲ್ಲಿ ಕೆಲವೊಂದು ಬದಲಾವಣೆಗಳಾಗುವ ಸಾಧ್ಯತೆ ದಟ್ಟವಾಗಿದೆ.
ಆಕಾಶ್ ದೀಪ್ ಮತ್ತು ಅರ್ಶದೀಪ್ ಸಿಂಗ್ ಗಾಯಗೊಂಡು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಜಸ್ಪ್ರೀತ್ ಬುಮ್ರಾ ಇಂದು ಭಾರತ ಪರ ಆಡುವುದು ಖಚಿತವಾಗಿದೆ. ಬುಮ್ರಾ ಜೊತೆಗೆ ಯುವ ವೇಗಿ ಅನ್ಶೂಲ್ ಕಾಂಬೋಜ್‌ಗೂ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿದೆ. ಮೊದಲ ಎರಡು ಟೆಸ್ಟ್‌ಗಳಲ್ಲಿ ಆಡಿದ್ದ ಪ್ರಸಿದ್ಧ್ ಕೃಷ್ಣ ನಿರಾಸೆ ಮೂಡಿಸಿದ ಹಿನ್ನೆಲೆಯಲ್ಲಿ ಅನ್ಶೂಲ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಪ್ರಸಿದ್ಧ್‌ರ ಸಾಧ್ಯತೆಗಳನ್ನು ನಾಯಕ ಶುಭಮನ್ ಗಿಲ್ ನಿನ್ನೆ ಸಂಪೂರ್ಣವಾಗಿ ತಳ್ಳಿಹಾಕಿಲ್ಲವಾದರೂ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 16.20 ಬ್ಯಾಟಿಂಗ್ ಸರಾಸರಿ ಹೊಂದಿರುವ ಕಾಂಬೋಜ್‌ರ ಬ್ಯಾಟಿಂಗ್ ಸಾಮರ್ಥ್ಯ ಯುವ ಆಟಗಾರನಿಗೆ ಅನುಕೂಲಕರವಾಗಲಿದೆ ಎಂದು ಭಾವಿಸಲಾಗುತ್ತಿದೆ. ವಿಶೇಷವಾಗಿ ಲಾರ್ಡ್ಸ್‌ನ ಎರಡನೇ ಇನ್ನಿಂಗ್ಸ್ ಹೊರತುಪಡಿಸಿ ಮೊದಲ ಮೂರು ಟೆಸ್ಟ್‌ಗಳಲ್ಲಿ ಭಾರತದ ಬಾಲಂಗೋಚಿಗಳು ತರಗೆಲೆಗಳಂತೆ ಉದುರಿ ಹೋಗಿದ್ದವು.
ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಬದಲಿಗೆ ಭಾರತ ಇಂದು ಸಾಯಿ ಸುದರ್ಶನ್‌ಗೆ ಅವಕಾಶ ನೀಡುವ ಸಾಧ್ಯತೆಯಿದೆ. ನಿನ್ನೆ ಸಾಯಿ ಸುದರ್ಶನ್ ನೆಟ್‌ನಲ್ಲಿ ದೀರ್ಘಕಾಲ ಅಭ್ಯಾಸ ನಡೆಸಿದ್ದು ಇದಕ್ಕೆ ಸೂಚನೆಯಾಗಿದೆ. ಮೊದಲ ಮೂರು ಟೆಸ್ಟ್‌ಗಳಲ್ಲಿ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಕರುಣ್ ನಾಯರ್‌ಗೆ ಸಾಧ್ಯವಾಗಿರಲಿಲ್ಲ. ಸ್ಪಿನ್ನರ್‌ಗಳಾಗಿ ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮ್ಯಾಂಚೆಸ್ಟರ್‌ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಾರ್ದೂಲ್ ಠಾಕೂರ್‌ಗೆ ನಾಲ್ಕನೇ ವೇಗಿಯಾಗಿ ಅವಕಾಶ ನೀಡಿದರೆ ವಾಷಿಂಗ್ಟನ್ ಸುಂದರ್ ಹೊರಬೀಳಲಿದ್ದಾರೆ.
ನಾಲ್ಕನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಹನ್ನೊಂದರ ಬಳಗ:
ಕೆ ಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಕರುಣ್ ನಾಯರ್/ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್/ಶಾರ್ದೂಲ್ ಠಾಕೂರ್, ಅನ್ಶೂಲ್ ಕಾಂಬೋಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
