Ashes Test: ಕೊನೇ ವಿಕೆಟ್ ಗೆ ಇಂಗ್ಲೆಂಡ್ ಹೋರಾಟ, ಸಿಡ್ನಿ ಟೆಸ್ಟ್ ರೋಚಕ ಡ್ರಾ!
ಆಸೀಸ್ ಗೆ ಗೆಲುವು ನಿರಾಕರಿಸಿದ ಇಂಗ್ಲೆಂಡ್ ಕೊನೇ ವಿಕೆಟ್ ಜೋಡಿ
ಆಸ್ಟ್ರೇಲಿಯಾ ತಂಡಕ್ಕೆ ತಪ್ಪಿದ ಆ್ಯಷಸ್ ವೈಟ್ ವಾಷ್
ಸೋಲು ತಪ್ಪಿಸಿಕೊಳ್ಳಲು ಇಡೀ ದಿನ ಹೋರಾಟ ನಡೆಸಿದ ಇಂಗ್ಲೆಂಡ್

ಸಿಡ್ನಿ (ಜ. 9): ಕೊನೇ ವಿಕೆಟ್ ಗೆ ತಂಡದ ವೀರಾವೇಶದ ಹೋರಾಟದಿಂದಾಗಿ ಆ್ಯಷಸ್ ಟೆಸ್ಟ್ (Ashes Test) ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆತಿಥೇಯ ಆಸ್ಟ್ರೇಲಿಯಾ (Australia) ವಿರುದ್ಧ ರೋಚಕ ಡ್ರಾ ಸಾಧಿಸಲು ಯಶ ಕಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಐತಿಹಾಸಿಕ ಆ್ಯಷಸ್ ವೈಟ್ ವಾಷ್ ಕನಸು ಭಗ್ನವಾಗಿದ್ದರೆ, ಸತತ ಸೋಲುಗಳಿಂದ ಕಂಗೆಟ್ಟಿದ್ದ ಇಂಗ್ಲೆಂಡ್ (England) ತಂಡಕ್ಕೆ ಡ್ರಾ ಫಲಿತಾಂಶ ಕೂಡ ಗೆಲುವಿನಷ್ಟೇ ಸಮಾಧಾನ ತಂದಿದೆ. ಮೊದಲ ಇನ್ನಿಂಗ್ಸ್ ನ ಹೀರೋಗಳಾದ ಬೆನ್ ಸ್ಟೋಕ್ಸ್ (Ben Stokes) ಹಾಗೂ ಜಾನಿ ಬೇರ್ ಸ್ಟೋ (Bairstow) ನೇತೃತ್ವದಲ್ಲಿ ಅಂತಿಮ ದಿನ ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸಿದ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು, ಅಂತಿಮ ದಿನದ ನಿಗದಿತ ಓವರ್ ಗಳನ್ನು ಆಡಲು ಯಶ ಕಂಡಿತು. ದಿನದಾಟ ಮುಕ್ತಾಯಕ್ಕೆ ಎರಡು ಓವರ್ ಬಾಕಿ ಇದ್ದ ವೇಳೆ ಆಸೀಸ್ ಗೆಲುವಿಗೆ 1 ವಿಕೆಟ್ ಬೇಕಿದ್ದವು. ಈ ಹಂತದಲ್ಲಿ ಅನುಭವಿ ಆಟಗಾರರಾದ ಸ್ಟುವರ್ಟ್ ಬ್ರಾಡ್ (Stuart Broad) ಹಾಗೂ ಜೇಮ್ಸ್ ಆಂಡರ್ ಸನ್ (James Anderson) ಬಹಳ ಎಚ್ಚರಿಕೆಯಿಂದ ಆಟವಾಡುವ ಮೂಲಕ ತಂಡದ ಸೋಲನ್ನು ತಪ್ಪಿಸಿದರು.
ಗೆಲ್ಲಲು 388 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಂದ ಅಂತಿಮ ದಿನವಾದ ಭಾನುವಾರ ಆಟ ಆರಂಭಿಸಿತು. ಕೊನೇ ಅವಧಿಯ ಆಟದಲ್ಲಿ ಇಂಗ್ಲೆಂಡ್ 35 ಓವರ್ ಗಳನ್ನು ಎದುರಿಸಬೇಕಿದ್ದರೆ, ಆಸೀಸ್ ಗೆಲುವಿಗೆ 6 ವಿಕೆಟ್ ಗಳು ಬೇಕಿದ್ದವು. ಈ ಅವಧಿಯಲ್ಲಿ ಇಂಗ್ಲೆಂಡ್ ತಂಡ ಡ್ರಾ ಮಾಡಿಕೊಳ್ಳುತ್ತದೆ ಎಂದೇ ಎಲ್ಲರೂ ಅಂದಾಜು ಮಾಡಿದ್ದರು.
ಆದರೆ, ಚಹಾ ವಿರಾಮ ಬಳಿಕ ದಾಳಿಗಿಳಿದ ಪ್ಯಾಟ್ ಕಮ್ಮಿನ್ಸ್ ಬಟ್ಲರ್ (11) ವಿಕೆಟ್ ಉರುಳಿಸಿದರೆ, ಮಾರ್ಕ್ ವುಡ್ ಎರಡೇ ಎಸೆತ ಎದುರಿಸಿ ಔಟಾದರು. ಜಾನಿ ಬೇರ್ ಸ್ಟೋ (41) ಹಾಗೂ ಜಾಕ್ ಲೀಚ್ (26) ಎಂಟನೇ ವಿಕೆಟ್ ಗೆ ಅಮೂಲ್ಯ ಜೊತೆಯಾಟವಾಡುವ ಮೂಲಕ ಕ್ರೀಸ್ ನಲ್ಲಿ ಕೆಲ ಹೊತ್ತು ಕಾಲ ಕಳೆದರು. 92ನೇ ಓವರ್ ನಲ್ಲಿ ಬೇರ್ ಸ್ಟೋ ಔಟಾದ ಬಳಿಕ ಬ್ರಾಡ್ ಜೊತೆ ಜಾಕ್ ಲೀಚ್ ಸೋಲು ತಪ್ಪಿಸಿಕೊಳ್ಳುವ ಪ್ರಯತ್ನಕ್ಕಿಳಿದರು. ಇನ್ನೇನು ಇದರಲ್ಲಿ ಇಂಗ್ಲೆಂಡ್ ಯಶ ಕಂಡಿತು ಎನ್ನುವಾಗಲೇ 100ನೇ ಓವರ್ ನಲ್ಲಿ ಜಾಕ್ ಲೀಚ್ ಔಟಾದರು. ಕೊನೆಗೆ ಜೇಮ್ಸ್ ಆಂಡರ್ ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಕೊನೇ ಎರಡು ಓವರ್ ಗಳನ್ನು ಎಚ್ಚರಿಕೆಯಿಂದ ಎದುರಿಸಿ ಡ್ರಾ ಫಲಿತಾಂಶಕ್ಕೆ ಕಾರಣರಾದರು.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಗೆ 416 ರನ್ ಬಾರಿ ಡಿಕ್ಲೇರ್ ಘೋಷಣೆ ಮಾಡಿದರೆ, ಇಂಗ್ಲೆಂಡ್ 294 ರನ್ ಗೆ ಆಲೌಟ್ ಆಗಿತ್ತು.ಇದರಿಂದ 122 ರನ್ ಗಳ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯಾ ತಂಡ 2ನೇ ಇನ್ನಿಂಗ್ಸ್ ನಲ್ಲಿ6 ವಿಕೆಟ್ ಗೆ 265 ರನ್ ಬಾರಿಸಿ ಡಿಕ್ಲೇರ್ ಘೋಷಣೆ ಮಾಡಿತ್ತು. ಗೆಲುವಿಗೆ 388 ರನ್ ಗಳ ಗುರಿ ಪಡೆದಿದ್ದ ಇಂಗ್ಲೆಂಡ್, ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕಟ್ ನಷ್ಟವಿಲ್ಲೆ 30 ರನ್ ಬಾರಿಸಿತ್ತು. ಎಚ್ಚರಿಕೆಯ ಆರಂಭ ಪಡೆದ ಹೊರತಾಗಿಯೂ 100 ರನ್ ಬಾರಿಸುವ ವೇಳೆಗೆ ಹಸೀಬ್ ಅಹ್ಮದ್, ಡೇವಿಡ್ ಮಲಾನ್ ಹಾಗೂ ಜಾಕ್ ಕ್ರಾವ್ಲಿ ಅವರ ವಿಕೆಟ್ ಗಳನ್ನು ಇಂಗ್ಲೆಂಡ್ ಕಳೆದುಕೊಂಡಿತ್ತು.
Ashes Test: ಸಿಡ್ನಿ ಟೆಸ್ಟ್‌ನಲ್ಲಿ ಮತ್ತೊಂದು ಶತಕ ಚಚ್ಚಿದ ಉಸ್ಮಾನ್ ಖವಾಜ..!
ಭೋಜನ ವಿರಾಮದ ಬಳಿಕ 7 ಓವರ್ ಗಳು ಮಳೆಯಿಂದಾಗಿ ಕಡಿತವಾದ ಕಾರಣ, ಈ ಅವಧಿಯಲ್ಲಿ ಕೇವಲ ಜೋ ರೂಟ್ ಒಬ್ಬರ ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ಎಚ್ಚರಿಕೆಯ ಆಟವಾಡಿತ್ತು. ರೂಟ್ ಹಾಗೂ ಸ್ಟೋಕ್ಸ್ ಬೌಂಡರಿ ಬಾರಿಸುವ ಚೆಂಡನ್ನೂ ಡಿಫೆಂಡ್ ಮಾಡಿಕೊಳ್ಳುತ್ತಿದ್ದರು. ನಾಲ್ಕನೇ ವಿಕೆಟ್ ಗೆ 60 ರನ್ ಜೊತೆಯಾಟವಾಡಿ ಈ ಜೋಡಿ ಬೇರ್ಪಟ್ಟಿತು. ಇನ್ನೊಂದೆಡೆ ರೂಟ್ ವಿಕೆಟ್ ಉರುಳಿದ ಬೆನ್ನಲ್ಲೇ ಸ್ಟೋಕ್ಸ್ ವೇಗವಾಗಿ ಆಡಲು ಆರಂಭಿಸಿದರು. ತಮ್ಮ 60 ರನ್ ಗಳ ಇನ್ನಿಂಗ್ಸ್ ನಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿದ್ದರು. ದಿನದ ಮೊದಲ ಅವಧಿಯ ಆಟದಲ್ಲಿ ಮೂರು ವಿಕೆಟ್ ಉರುಳಿಸಿದ್ದ ಆಸ್ಟ್ರೇಲಿಯಾ 2ನೇ ಅವಧಿಯ ಆಟದಲ್ಲಿ ಕೇವಲ 1 ವಿಕೆಟ್ ಉರುಳಿಸಿತು.
ಉಭಯ ದೇಶಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಜನವರಿ 14 ರಿಂದ 18ರವರೆಗೆ ಹೋಬರ್ಟ್ ನಲ್ಲಿ ನಡೆಯಲಿದ್ದು, ಇದು ಅಹರ್ನಿಶಿ ಟೆಸ್ಟ್ ಪಂದ್ಯ ಆಗಿರಲಿದೆ.
ಆಸ್ಟ್ರೇಲಿಯಾ: 8 ವಿಕೆಟ್ ಗೆ 416 ಡಿಕ್ಲೇರ್ & 6 ವಿಕೆಟ್ ಗೆ 265 ಡಿಕ್ಲೇರ್ (ಮಾರ್ಕಸ್ ಹ್ಯಾರಿಸ್ 27, ಉಸ್ಮಾನ್ ಖವಾಜಾ 101*, ಕ್ಯಾಮರೂನ್ ಗ್ರೀನ್ 74; ಮಾರ್ಕ್ ವುಡ್ 65ಕ್ಕೆ 2, ಜಾಕ್ ಲೀಚ್ 84ಕ್ಕೆ 4) ಇಂಗ್ಲೆಂಡ್: 294 ಮತ್ತು 9 ವಿಕೆಟ್ ಗೆ 270 (ಜಾಕ್ ಕ್ರಾವ್ಲಿ 77, ಜೋ ರೂಟ್ 24, ಬೆನ್ ಸ್ಟೋಕ್ಸ್ 60, ಜಾನಿ ಬೈರ್‌ಸ್ಟೋ 41, ಜಾಕ್ ಲೀಚ್ 26; ಪ್ಯಾಟ್ ಕಮ್ಮಿನ್ಸ್ 80ಕ್ಕೆ 2 ಸ್ಕಾಟ್ ಬೋಲ್ಯಾಂಡ್ 30ಕ್ಕೆ 3, ನಾಥನ್ ಲ್ಯಾನ್ 28ಕ್ಕೆ 2). ಪಂದ್ಯಶ್ರೇಷ್ಠ: ಉಸ್ಮಾನ್ ಖವಾಜ